ಅಂತ್ಯಸಂಸ್ಕಾರವನ್ನು ಮಾಡಿದ್ದ ಪುತ್ರ 12 ವರ್ಷಗಳ ಬಳಿಕ ಮತ್ತೆ ದೊರಕಿದ: ಆತನ ಮನೆಯಲ್ಲೀಗ ಸಂಭ್ರಮದ ವಾತಾವರಣ!
Monday, April 11, 2022
ಬಕ್ಸರ್(ಬಿಹಾರ): ಕಳೆದ 12 ವರ್ಷಗಳ ಹಿಂದೆ ಹಠಾತ್ತಾಗಿ ಮನೆಯಿಂದ ನಾಪತ್ತೆಯಾಗಿದ್ದ ಮನಮಗ ಇದೀಗ ಮತ್ತೆ ಮನೆಗೆ ವಾಪಸ್ ಸಿಕ್ಕಿದ್ದು, ಈ ಕುಟುಂಬದಲ್ಲೀಗ ಸಂಭ್ರಮ ಮನೆ ಮಾಡಿದೆ. ಇದೀಗ ಆತನನ್ನು ಕರೆತರಲು ಬಕ್ಸರ್ ಪೊಲೀಸರ ತಂಡ ಪಂಜಾಬ್ನ ಗುರುದಾಸ್ ಪುರಕ್ಕೆ ತೆರಳಿದ್ದಾರೆ.
ಮುಫಿಸ್ಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ಖಿಲಾಫತ್ಪುರ ಗ್ರಾಮದ ನಿವಾಸಿ ಛಾವಿ ಮುಸಾಹರ್ 12 ವರ್ಷಗಳ ಹಿಂದೆ ಹಠಾತ್ತಾಗಿ ಮನೆಯಿಂದ ನಾಪತ್ತೆಯಾಗಿದ್ದ. ಈ ವೇಳೆ ಆತನನ್ನು ಕುಟುಂಬಸ್ಥರು ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೆ ಆತ ಪತ್ತೆಯಾಗಿರಲೇ ಇಲ್ಲ. ಹೀಗಾಗಿ ಆತ ಮೃತಪಟ್ಟಿದ್ದಾನೆಂದು ಎಂದು ಗ್ರಹಿಸಿ ಅಂತಿಮ ವಿಧಿವಿಧಾನಗಳನ್ನು ನಡೆಸಿದ್ದರು.
ಆದರೆ, ಕಳೆದ ವರ್ಷ ಡಿಸೆಂಬರ್ನಲ್ಲಿ ಯುವಕನೋರ್ವನು ದಾರಿ ತಪ್ಪಿ ಪಾಕಿಸ್ತಾನ ತಲುಪಿದ್ದ ಬಗ್ಗೆ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿತ್ತು. ಪಾಕಿಸ್ತಾನ ಆತನನ್ನು ಬಂಧಿಸಿ ಕರಾಚಿ ಜೈಲಿನಲ್ಲಿ ಇರಿಸಿತ್ತು. ಇದಾದ ಬಳಿಕ ಆತನನ್ನು ಭಾರತಕ್ಕೆ ಕರೆತರಲುವ ಕಾರ್ಯ ಆರಂಭವಾಗಿತ್ತು. ಇದೀಗ ತಮ್ಮ ಪುತ್ರ ಜೀವಂತವಾಗಿದ್ದಾನೆಂದು ತಿಳಿಯುತ್ತಿದ್ದಂತೆ ಆತನ ತಾಯಿಯ ಸಂತೋಷಕ್ಕೆ ಪಾರವೇ ಇರಲಿಲ್ಲ.
ಪಾಕ್ ಜೈಲಿನಲ್ಲಿದ್ದ ಮುಸಾಹರ್ನನ್ನು ಪಾಕ್ ಈಗಾಗಲೇ ಭಾರತದ ಬಿಎಸ್ಎಫ್ಗೆ ಹಸ್ತಾಂತರ ಮಾಡಿದೆ. ಹೀಗಾಗಿ ಬಿಹಾರ ಪೊಲೀಸರು ಆತನನ್ನು ಕರೆತರಲು ಗುರುದಾಸ್ಪುರಕ್ಕೆ ತೆರಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವೃತ್ತಿ ದೇವಿ, "ತನ್ನ ಪುತ್ರ ಸಿಗದ ಕಾರಣ ಆತ ಮೃತಪಟ್ಟಿದ್ದಾನೆಂದು ಭರವಸೆ ಕೈಬಿಟ್ಟಿದ್ದೆ. ಜೊತೆಗೆ ಅಂತ್ಯಸಂಸ್ಕಾರ ಸಹ ಮಾಡಿದ್ದೆವು. ಆದರೆ, ಆತ ದಾರಿ ತಪ್ಪಿ ಪಾಕಿಸ್ತಾನಕ್ಕೆ ಹೋಗಿರುವ ವಿಷಯ ಗೊತ್ತಾಗಿದ್ದು, ಇದೀಗ ಹಿಂತಿರುಗುತ್ತಿದ್ದಾನೆ" ಎಂದಿದ್ದಾರೆ.
ಮುಸಾಹರ್ಗೆ ಈಗಾಗಲೇ ಮದುವೆಯಾಗಿದ್ದು, ಒಂದು ಮಗು ಸಹ ಇದೆ. ಆದರೆ, ಇದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಪತಿ ವಾಪಸ್ ಬಾರದ ಕಾರಣ ಈತನ ಪತ್ನಿ ತನ್ನ ಮಗುವಿನೊಂದಿಗೆ ತವರು ಮನೆಯಲ್ಲಿ ಉಳಿದುಕೊಂಡಿದ್ದಾಳೆ.