ಬೀಜಿಂಗ್: 14 ವರ್ಷಗಳಿಂದ ಮನೆ ತೊರೆದು ವಿಮಾನ ನಿಲ್ದಾಣದ ಆವರಣದಲ್ಲೇ ವಾಸಿಸುತ್ತಿದ್ದಾನೆ ಈ ವ್ಯಕ್ತಿ
Friday, April 1, 2022
ಬೀಜಿಂಗ್: ಚೀನಾದಲ್ಲಿ ವ್ಯಕ್ತಿಯೋರ್ವನು ಕಳೆದ 14 ವರ್ಷಗಳಿಂದ ಮನೆಯನ್ನು ತೊರೆದು ವಿಮಾನ ನಿಲ್ದಾಣದ ಆವರಣದಲ್ಲೇ ವಾಸಿಸುತ್ತಿರುವ ಬಗ್ಗೆ ಚೀನಾದ ಮಾಧ್ಯಮಗಳು ವರದಿ ಮಾಡಿವೆ.
60 ವರ್ಷ ವಯಸ್ಸಿನ ವೀ ಜಿಯಾಂಗ್ ಎಂಬಾತ ವಿಪರೀತ ಧೂಮಪಾನ ಹಾಗೂ ಮದ್ಯಸೇವನೆಯ ಚಟ ದಾಸನಾಗಿದ್ದ. ಪರಿಣಾಮ ಈತ ತನ್ನ 40ನೇ ವಯಸ್ಸಿಗೆ ಕೆಲಸವನ್ನು ಕಳೆದುಕೊಂಡಿದ್ದ. ಆ ಬಳಿಕ ಆತ ಅಂದರೆ 2008ರಿಂದ ಬೀಜಿಂಗ್ ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ನಲ್ಲಿ ವಾಸಿಸುತ್ತಿದ್ದಾನೆ. ಈತನಿಗೆ ಸರಕಾರದಿಂದ ಪ್ರತೀ ತಿಂಗಳು ಸುಮಾರು 150 ಡಾಲರ್ ಪಿಂಚಣಿ ದೊರಕುತ್ತಿದೆ.
ಈತನ ದಿನಚರಿ ಹೀಗಿದ್ದು, ದಿನಾ ಬೆಳಗ್ಗೆ ಎದ್ದು ಸಮೀಪದ ಮಾರುಕಟ್ಟೆಗೆ ಹೋಗಿ 6 ಬನ್ ಮತ್ತು ಸ್ವಲ್ಪ ಗಂಜಿ ತಿನ್ನುತ್ತಾನೆ. ಮಧ್ಯಾಹ್ನದ ಊಟ ಪಾರ್ಸೆಲ್ ಮಾಡಿ ಮತ್ತು ಒಂದು ಬಾಟಲ್ ಸಾರಾಯಿ ಖರೀದಿಸುತ್ತಾನೆ. ಜತೆಗೆ ಸಿಗರೇಟು ಇಷ್ಟಿದ್ದರೆ ಸಾಕು, ಆರಾಮವಾಗಿ ಬದುಕಬಹುದು ಎನ್ನುತ್ತಾನೆ ಜಿಯಾಂಗ್.
ಈತನಿಗೆ ಮನೆ, ಹೆಂಡತಿ , ಕುಟುಂಬ ಎಲ್ಲವೂ ಇದೆ. ಆದರೆ ಮನೆಗೆ ಹೋದರೆ ತನಗೆ ಸ್ವತಂತ್ರಯಿಲ್ಲ. ಮನೆಗೆ ಬರಬೇಕಿದ್ದರೆ ಧೂಮಪಾನ ಹಾಗೂ ಮದ್ಯಪಾನ ಬಿಡಬೇಕೆಂಬ ಷರತ್ತು ಇದೆ. ಹಾಗೆ ಮಾಡಿದರೆ ನನಗೆ ಬರುತ್ತಿರುವ ಪೆನ್ಷನ್ ಅವರಿಗೆ ಕೊಡಬೇಕಾಗುತ್ತದೆ. ಅದರ ಬದಲು, ಇಲ್ಲಿ ನನಗೆ ಇಷ್ಟಬಂದಂತೆ ಇರಬಹುದು ಎಂದು ಈತ ಹೇಳುತ್ತಾನೆ.
2017ರಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಪೊಲೀಸರ ನೆರವು ಪಡೆದು ಈತನನ್ನು ಎಳೆದೊಯ್ದು 20 ಕಿ.ಮೀ ದೂರದಲ್ಲಿರುವ ಮನೆಗೆ ಬಿಟ್ಟುಬಂದಿದ್ದರು. ಆದರೆ ಕೆಲವೇ ದಿನಗಳಲ್ಲಿ ಈತ ಮತ್ತೆ ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ನ ತನ್ನ ನೆಲೆಗೆ ಮರಳಿದ್ದಾನೆ. ಮನೆಯಲ್ಲಿ ಅವಮಾನ ಎದುರಿಸಲಾಗದೆ ಮತ್ತೆ ಮೊದಲಿನ ಜಾಗಕ್ಕೆ ಬಂದಿದ್ದೇನೆ. ಇಲ್ಲಿ ಕನಿಷ್ಟ ಇಷ್ಟಬಂದಂತೆ ಬದುಕುವ ಅವಕಾಶವಾದರೂ ಇದೆ ಎಂಬುದು ಜಿಯಾಂಗ್‌ನ ಅಭಿಪ್ರಾಯವಾಗಿದೆ.