ಜೈನ ಸಂನ್ಯಾಸಿಯಾಗಲು ಹೊರಟ ಶಿವಮೊಗ್ಗದ 14ರ ಬಾಲಕಿ!
Wednesday, April 20, 2022
ಹುಬ್ಬಳ್ಳಿ: ಭೌತಿಕ ಸುಖ, ವೈಭೋಗಗಳಿಗೆ ತಿಲಾಂಜಲಿ ಅರ್ಪಿಸಿ ಲೋಕ ಕಲ್ಯಾಣಕ್ಕಾಗಿ ತನ್ನನ್ನು ಸಮರ್ಪಿಸಿಕೊಳ್ಳಲೆಂದು ಬಾಲಕಿಯಳರ್ವಳು ಜೈನ ಸಂನ್ಯಾಸಿನಿಯಾಗಲು ತಯಾರಾಗಿದ್ದಾಳೆ. ಶಿವಮೊಗ್ಗದ ಮೂಲದ 14 ವರ್ಷದ ಬಾಲಕಿ ಸಿದ್ದಿ ವಿನಾಯಕಿಯಾ ಸಿದ್ಧಳಾಗಿದ್ದಾಳೆ.
ಈಕೆ ಎ. 21ರಂದು ನಗರದಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಶ್ರೀಜೈನ ಭಗವತಿ ದೀಕ್ಷೆ ಸ್ವೀಕರಿಸಲಿದ್ದಾಳೆ. ಶಿವಮೊಗ್ಗದ ಶಾಂತಿಲಾಲ ಹಾಗೂ ಸಂತೋಷದೇವಿಯವರ ಪುತ್ರಿ ಸಿದ್ಧಿ ವಿನಾಯಕಿಯಾ ಈಗಾಗಲೇ ತಮ್ಮ ಪರಿವಾರದಲ್ಲಿ ದೀಕ್ಷೆ ಪಡೆದಿರುವ ಅತ್ತೆ ಧರ್ಮಶೀಲಾಜಿ ಅವರ ಪ್ರಭಾವಕ್ಕೆ ಒಳಗಾಗಿದ್ದಾರಂತೆ.
“ಮನೆಗೆ ಬರುತ್ತಿದ್ದ ಸಾಧು-ಸಂತರನ್ನು ನೋಡುತ್ತಿದ್ದ ನನಗೆ ಅವರಂತೆ ಆಗಬೇಕೆಂದು ಬಯಕೆ ಹುಟ್ಟಿದೆ. ಜಗದ ಮೋಹವನ್ನು ತ್ಯಾಗ ಮಾಡಿರುವ ನಾನು ಧಾರ್ಮಿಕ ಸೆಳೆತಕ್ಕೆ ಒಳಗಾಗಿರುವೆ. ಇಲ್ಲಿ ವಯಸ್ಸು ಮಹತ್ವದ್ದಾಗುವುದಿಲ್ಲ” ಎಂದು ವಿನಾಯಕಿಯಾ ತಿಳಿಸಿದರು.
ಶ್ರೀ ವರ್ಧಮಾನ ಸ್ಥಾನಕವಾಸಿ ಜೈನ ಶ್ರಾವಕ ಸಂಘದ ಆಶ್ರಯದಲ್ಲಿ ಜೈನ ಭಗವತಿ ದೀಕ್ಷಾ ಸಮಾರಂಭ ಆಯೋಜಿಸಲಾಗಿದೆ. ರಾಷ್ಟ್ರ ಸಂತ ಶ್ರೀ ನರೇಶ ಮುನಿಜಿ, ಶ್ರೀ ಶಾಲಿಭದ್ರ ಮುನಿಜಿ, ದಕ್ಷಿಣ ದೀಪಿಕಾ, ಗುರುಣಿ ಮೈಯ್ಯಾ, ಶ್ರೀ ಸತ್ಯಪ್ರಭಾಜಿ, ಮಹಾಸತಿ ಸಾಧ್ವಿಶ್ರೀ, ಮಹಾಸತಿ ದರ್ಶನಪ್ರಭಾಜಿ ಹಾಗೂ ವಿವಿಧ ಸಾಧು ಸಂತರ ದಿವ್ಯ ಸಾನ್ನಿಧ್ಯದಲ್ಲಿ ಬಾಲಕಿಯು ದೀಕ್ಷೆ ಸ್ವೀಕರಿಸಲಿದ್ದಾಳೆ.