2ನೇ ವಿವಾಹವಾಗುತ್ತಿದ್ದ ಪತಿಗೆ ಭರ್ಜರಿ ಗಿಫ್ಟ್ ಕೊಟ್ಟ ಮೊದಲ ಪತ್ನಿ!
Tuesday, April 5, 2022
ಜಂಜಗಿರ್ ಚಂಪಾ (ಛತ್ತೀಸ್ಘಡ) : ಮೊದಲನೇ ಪತ್ನಿಗೆ ಬದುಕಿದ್ದಾಗಲೇ ಸದ್ದಿಲ್ಲದೆ ಎರಡನೇ ವಿವಾಹವಾಗುತ್ತಿದ್ದ ಭೂಪನಿಗೆ ಮದುವೆ ಮಂಟಪಕ್ಕೆ ಆಗಮಿಸಿರುವ ಮೊದಲ ಪತ್ನಿ ಪತಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾಳೆ. ಹೌದು, ಜಂಜಗಿರ್ ಚಂಪಾದಲ್ಲಿ ವರನಿಗೆ ಸರಿಯಾಗಿ ಬಾರಿಸುತ್ತಿರುವ ವೀಡಿಯೋವೊಂದು ಭಾರಿ ಸದ್ದು ಮಾಡುತ್ತಿದೆ. ಈ ಘಟನೆ ಶಿವನಾರಾಯಣ ಬಡೇಮಠ ದೇವಸ್ಥಾನದಲ್ಲಿ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಲೋಡಾ ಬಜಾರ್ ನಿವಾಸಿ ಸೋಮ್ ಪ್ರಕಾಶ್ ಜೈಸ್ವಾಲ್ ಎಂಬಾತನ ಮದುವೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿತ್ತು. ಆಗ ಅಲ್ಲಿಗೆ ಮೊದಲ ಪತ್ನಿ ತನ್ನ ಸಂಬಂಧಿಕರೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಇದಾದ ಬಳಿಕ ಎರಡೂ ಕುಟುಂಬದ ನಡುವೆ ವಾಗ್ವಾದ ನಡೆದಿದೆ. ಬಳಿಕ ಎರಡೂ ಕುಟುಂಬದವರು ಶಿವನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಿಸಿದ್ದಾರೆ.
2017ರ ಮೇ 7 ರಂದು ಬಲೋಡಾ ಬಜಾರ್ ನಿವಾಸಿ ಸೋಮ್ ಪ್ರಕಾಶ್ ಜೈಸ್ವಾಲ್ ಮೊದಲನೇ ವಿವಾಹವಾಗಿದ್ದ. ಬಳಿಕ ವರದಕ್ಷಿಣೆಗಾಗಿ ಕಿರುಕುಳ ನೀಡಲಾರಂಭಿಸಿದ್ದರಿಂದ ಮದುವೆಯಾದ ಒಂದು ತಿಂಗಳಲ್ಲೇ ಆಕೆ ತಾಯಿ ಮನೆ ಸೇರಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಜೈಸ್ವಾಲ್ 2 ಲಕ್ಷ ರೂ. ಬೆಲೆ ಬಾಳುವ ಬೈಕ್ ತಂದು ಕೊಟ್ಟ ಬಳಿಕವೇ ಮನೆಗೆ ಬರುವಂತೆ ತಾಕೀತು ಮಾಡಿದ್ದಾನೆ. ಈ ನಡುವೆ ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಎರಡನೇ ಮದುವೆಯಾಗಲು ಹೊರಟಿದ್ದನು.