ಮಂಗಳೂರು: ಕಾರು ಖರೀದಿಸಬೇಕೆಂದಿದ್ದ ವ್ಯಕ್ತಿಯಿಂದ 2 ಲಕ್ಷ ರೂ. ದರೋಡೆ: 8 ಮಂದಿಗೆ 7ವರ್ಷ ಕಠಿಣ ಸಜೆ
Saturday, April 2, 2022
ಮಂಗಳೂರು : ಕಾರು ಖರೀದಿಸಬೇಕೆಂದಿದ್ದ ವ್ಯಕ್ತಿಯೊಬ್ಬರಿಂದ 2 ಲಕ್ಷ ರೂ. ಹಣ ದರೋಡೆಗೈದ 8 ಮಂದಿ ದರೋಡೆಕೋರರ ಮೇಲಿನ ಆರೋಪ ಸಾಬೀತುಗೊಂಡ ಹಿನ್ನೆಲೆಯಲ್ಲಿ ಮಂಗಳೂರು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷ ಕಠಿಣ ಸಜೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಕಿಲೆಂಜಾರು ನಿವಾಸಿಗಳಾದ ಶಿವಪ್ರಸಾದ್ ಆಲಿಯಾಸ್ ಅಯ್ಯಪ್ಪ, ಸಂದೀಪ್ ಬಿ.ಪೂಜಾರಿ, ಕಾರ್ತಿಕ್ ಶೆಟ್ಟಿ, ತೆಂಕ ಎರ್ಮಾಳು ನಿವಾಸಿ ವರುಣ್ ಕುಮಾರ್, ಹೆಜಮಾಡಿ ನಿವಾಸಿ ಸುವಿನ್ ಕಾಂಚನ್ ಆಲಿಯಾಸ್ ಮುನ್ನ, ಪಡುಪೆರಾರದ ಗೋಪಾಲ ಗೌಡ, ಕೊಡೆತ್ತೂರಿನ ಸುಜಿತ್ ಶೆಟ್ಟಿ, ಕಿಳೆಂಜಾರಿನ ಸುಧೀರ್ ಶಿಕ್ಷೆಗೊಳಗಾದ ಆರೋಪಿಗಳು.
ನಗರದ ಅಶೋಕನಗರ ನಿವಾಸಿ ಚಿದಾನಂದ ಶೆಟ್ಟಿ ಹಳೆಯ ಇನ್ನೋವಾ ಕಾರು ಖರೀದಿಸಲು ಉದ್ದೇಶಿಸಿತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಆರೋಪಿಗಳಲ್ಲೋರ್ವ ಕಿಲೆಂಜಾರಿನ ಸುಧೀರ್ ಎಂಬಾತ ಚಿದಾನಂದ ಶೆಟ್ಟಿಯವರಿಗೆ ದೂರವಾಣಿ ಕರೆ ಮೂಲಕ ಸಂಪರ್ಕಿಸಿ ತನ್ನನ್ನು ಅವಿನಾಶ್ ಎಂದು ಸುಳ್ಳು ಹೇಳಿ ಪರಿಚಯಿಸಿಕೊಂಡಿದ್ದ. ಅಲ್ಲದೆ ‘ಚಿಕ್ಕಪ್ಪನ ಹಳೆಯ ಕಾರು ಮಾರಾಟಕ್ಕಿದೆ. ಈ ಬಗ್ಗೆ ಮಾತನಾಡಲು ಸುರತ್ಕಲ್ ಬಳಿ ಬರುವಂತೆ ಸೂಚಿಸಿದ್ದ. ಆತನ ಮಾತನ್ನು ನಂಬಿ ಚಿದಾನಂದ ಶೆಟ್ಟಿಯವರು 2016ರ ಡಿ.23ರಂದು ತಮ್ಮ ಗೆಳೆಯ ಅಶ್ವಿತ್‌ನೊಂದಿಗೆ ಸುರತ್ಕಲ್ ಬಸ್ ನಿಲ್ದಾಣಕ್ಕೆ ತೆರಳಿದ್ದಾರೆ.
ಅಲ್ಲಿಗೆ ಬಂದಿದ್ದ ಸುಧೀರ್ ಸಂಜೆ ಮುಂಗಡ ಹಣ ತೆಗೆದುಕೊಂಡು ಕಾರ್ನಾಡ್ ಜಂಕ್ಷನ್‌ಗೆ ಬರುವಂತೆ ಸೂಚಿಸಿದ್ದ. ಅದರಂತೆ ಚಿದಾನಂದ ಶೆಟ್ಟಿಯವರು ತಮ್ಮ ಗೆಳೆಯರಾದ ಅಶ್ವಿತ್ ಹಾಗೂ ಭರತ್ ಎಂಬವರೊಂದಿಗೆ ಕಾರಿನಲ್ಲಿ 2 ಲಕ್ಷ ರೂ. ಹಣದೊಂದಿಗೆ ಕಾರ್ನಾಡಿಗೆ ಬಂದಿದ್ದಾರೆ. ಬಳಿಕ ಸುಧೀರ್‌ನೊಂದಿಗೆ ತಾಳಿಪ್ಪಾಡಿ ಹೊಸಮನೆ ಎಂಬಲ್ಲಿನ ಗುಡ್ಡ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿ ಸುಧೀರ್ ಕಾರಿನಿಂದ ಇಳಿದು ‘ಚಿಕ್ಕಪ್ಪನ ಮನೆ ಇಲ್ಲಿಯೇ ಇದೆ. ಅವರನ್ನು ಕರೆದುಕೊಂಡು ಬರುತ್ತೇನೆ’ ಎಂದು ಹೋಗಿದ್ದಾನೆ. ಅಷ್ಟರಲ್ಲಿ ತಲವಾರು, ಕಬ್ಬಿಣದ ರಾಡ್, ಪಂಚ್‌ಗಳೊಂದಿಗೆ ಕಾರು, ಸ್ಕೂಟರ್ ಮತ್ತು ಬೈಕ್‌ಗಳಲ್ಲಿ ಬಂದ ಆರೋಪಿಗಳು ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿದ್ದ 2 ಲಕ್ಷ ರೂ. ಹಣವನ್ನು ಬಲತ್ಕಾರದಿಂದ ಕಿತ್ತು ಅಶ್ವಿತ್‌ರಿಗೆ ಹಲ್ಲೆ ನಡೆಸಿದ್ದರು. ದುಷ್ಕರ್ಮಿಗಳ ಹಲ್ಲೆಯಿಂದ ಅಶ್ವಿತ್ ತಪ್ಪಿಸಿಕೊಂಡಾಗ ತಲವಾರಿನ ಹೊಡೆತವು ಅವರ ಮೊಬೈಲ್‌ಗೆ ಬಿದ್ದಿತ್ತು. ಅಲ್ಲದೆ ಕಾರಿಗೆ ಹಾನಿಯಾಗಿ ಸುಮಾರು 20 ಸಾವಿರ ರೂ. ನಷ್ಟವಾಗಿತ್ತು. ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಮಂಗಳೂರು 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸಿ ಆರೋಪಿಗಳು ತಪ್ಪಿತಸ್ಥರೆಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ಬಸಪ್ಪ ಬಾಲಪ್ಪ ಜಕಾತಿಯವರು ಐಸಿಪಿ ಸೆಕ್ಷನ್ 395 ಜತೆಗೆ 367ರಡಿ ಎಸಗಿದ ಅಪರಾಧಕ್ಕೆ 7 ವರ್ಷ ಕಠಿಣ ಸಜೆ ಹಾಗೂ ತಲಾ 5 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 2 ತಿಂಗಳ ಸಾದಾ ಸಜೆ ವಿಧಿಸಿದ್ದಾರೆ. ಕಲಂ 440ರಡಿ ಎಸಗಿರುವ ಅಪರಾಧಕ್ಕೆ 2 ವರ್ಷ ಸಾದಾ ಸಜೆ ಹಾಗೂ ಪ್ರತಿಯೋರ್ವರಿಗೆ 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 2 ತಿಂಗಳ ಸಾದಾ ಸಜೆ ವಿಧಿಸಿದ್ದಾರೆ. ಅಲ್ಲದೆ ದಂಡದ ಮೊತ್ತವನ್ನು ದೂರುದಾರ ಚಿದಾನಂದ ಶೆಟ್ಟಿ, ಸಾಕ್ಷಿದಾರರಾದ ಅಶ್ವಿತ್, ಭರತ್, ಶಿವಪ್ರಸಾದ್ ಶೆಟ್ಟಿಯವರಿಗೆ ತಲಾ 15 ಸಾವಿರ ರೂ. ಹಣ ಪಾವತಿಸುವಂತೆ ಹಾಗೂ ಹಾನಿಯಾದ ಕಾರಿನ ಮಾಲಕ ಶಿವಪ್ರಸಾದ್ ಶೆಟ್ಟಿಗೆ ಸೂಕ್ತ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ.
ಸರಕಾರದ ಪರವಾಗಿ ಅಭಿಯೋಜಕ ನಾರಾಯಣ ಶೇರಿಗಾರ್ ಯು. ವಾದ ಮಂಡಿಸಿದ್ದಾರೆ.