ಕೆಜಿಎಫ್-2 ಸಿನಿಮಾ ನೋಡುತ್ತಿರುವಾಗ ಗುಂಡಿಕ್ಕಿದ ದುಷ್ಕರ್ಮಿ: ಓರ್ವ ಗಂಭೀರ, ಟಾಕೀಸ್ ಸೀಝ್
Wednesday, April 20, 2022
ಹಾವೇರಿ: ಕೆಜಿಎಫ್ ಸಿನಿಮಾ ನೋಡುತ್ತಿದ್ದ ಸಂದರ್ಭ ದುಷ್ಕರ್ಮಿಯೋರ್ವನು ಕ್ಷುಲ್ಲಕ ಕಾರಣಕ್ಕೆ ಥಿಯೇಟರ್ನೊಳಗಡೆ ಗುಂಡಿನ ದಾಳಿ ನಡೆಸಿದ್ದಾನೆ. ಪರಿಣಾಮ ಯುವಕನೋರ್ವನು ಗಂಭೀರವಾಗಿ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವ ಪಟ್ಟಣದ ರಾಜಶ್ರೀ ಟಾಕೀಸ್ನಲ್ಲಿ ನಡೆದಿದೆ.
ಈ ದುರ್ಘಟನೆ ಮಂಗಳವಾರ ರಾತ್ರಿ 10-30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಗುಂಡಿನ ದಾಳಿಯಿಂದ ಸಿನಿಮಾ ನೋಡಲು ಬಂದಿದ್ದ ಪ್ರೇಕ್ಷಕರು ಬೆಚ್ಚಿಬಿದ್ದಿದ್ದಾರೆ. ಬುಧವಾರ ಬೆಳಗ್ಗೆ ಬೆಂಗಳೂರಿನಿಂದ ಬೆರಳುಚ್ಚು ತಜ್ಞರು, ಶ್ವಾನ ದಳ ಹಾಗೂ ಪರಿಶೀಲನಾ ತಂಡ ಆಗಮಿಸಲಿದ್ದು, ಪಂಚನಾಮೆ ಆಗುವವರೆಗೂ ಥಿಯೇಟರ್ ಅನ್ನು ಸೀಝ್ ಮಾಡಲಾಗಿದೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಪ್ರತಿಕ್ರಿಯೆ ನೀಡಿ, ಶಿಗ್ಗಾಂವ ಪಟ್ಟಣದ ರಾಜಶ್ರೀ ಟಾಕೀಸಿನಲ್ಲಿ ಮಂಗಳವಾರ ರಾತ್ರಿ ಶೋ ಕೆಜಿಎಫ್-2 ಸಿನಿಮಾ ಪ್ರದರ್ಶನ ಆಗುತ್ತಿತ್ತು. ಸಿನಿಮಾ ವೀಕ್ಷಣೆ ಸಂದರ್ಭ ಸೀಟ್ ಮೇಲೆ ಕಾಲು ಹಾಕಿಕೊಂಡು ಕುಳಿತಿರುವ ವಿಚಾರದಲ್ಲಿ ಯುವಕರಿಬ್ಬರ ನಡುವೆ ಗಲಾಟೆ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿ, ಮಾತಿಗೆ ಮಾತು ಬೆಳೆದು ಪಕ್ಕದಲ್ಲಿದ್ದ ವ್ಯಕ್ತಿ ತನ್ನ ರಿವಾಲ್ವಾರ್ನಿಂದ ಶಿಗ್ಗಾಂವ ತಾಲೂಕಿನ ಮುಗಳಿ ಗ್ರಾಮದ ವಸಂತಕುಮಾರ್ ಶಿವಪೂರ(28) ಎಂಬಾತನ ಮೇಲೆ 3 ಸುತ್ತಿನ ಗುಂಡು ಹಾರಿಸಿ ಪರಾರಿಯಾಗಿದ್ದಾನೆ.
ವಸಂತಕುಮಾರ್ನ ಹೊಟ್ಟೆಗೆ ಗುಂಡು ಹೊಕ್ಕಿದ್ದು, ತಕ್ಷಣ ಸಾರ್ವಜನಿಕರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ.
ಗುಂಡಿನ ದಾಳಿ ನಡೆದ ಸ್ಥಳದಲ್ಲಿದ್ದ 2 ಖಾಲಿ ಕೋಕಾಗಳನ್ನು ಜಪ್ತಿ ಮಾಡಲಾಗಿದೆ. ಗಾಯಾಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಎರಡು ತಂಡ ರಚನೆ ಮಾಡಿದ್ದೇವೆ. ಆದಷ್ಟು ಬೇಗ ಆರೋಪಿಯನ್ನು ಅರೆಸ್ಟ್ ಮಾಡಲಾಗುತ್ತದೆ. ಸದ್ಯ ಟಾಕೀಸ್ ಅನ್ನು ಸೀಝ್ ಮಾಡಲಾಗಿದೆ ಎಂದು ಎಸ್ಪಿ ಹನುಮಂತರಾಯ್ ಮಾಹಿತಿ ನೀಡಿದರು.