ಸೋನಂ ಕಪೂರ್ ನಿವಾಸದಲ್ಲಿ 2.4 ಕೋಟಿ ರೂ. ಮೊತ್ತದ ಚಿನ್ನ-ನಗದು ಕಳವು ಪ್ರಕರಣ: ನರ್ಸ್ - ಆಕೆಯ ಪತಿಯೇ ಕಳ್ಳರು!
Wednesday, April 13, 2022
ಹೊಸದಿಲ್ಲಿ: ಬಾಲಿವುಡ್ ನಟಿ ಸೋನಂ ಕಪೂರ್ ಹಾಗೂ ಅವರ ಪತಿ ಉದ್ಯಮಿ ಆನಂದ್ ಅಹುಜಾರವರ ದಿಲ್ಲಿ ನಿವಾಸದಲ್ಲಿ ಇತ್ತೀಚೆಗೆ ನಡೆದಿರುವ 2.4 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಮತ್ತು ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ದಿಲ್ಲಿಯ ಅಮೃತಾ ಶೇರ್‍ಗಿಲ್ ರಸ್ತೆಯಲ್ಲಿರುವ ನಿವಾಸದಲ್ಲಿ ಸೋನಂ ಕಪೂರ್ ಅವರ ಅತ್ತೆಯನ್ನು ಅಂದರೆ ಆನಂದ್ ಅಹುಜಾ ತಾಯಿಯ ಸುಶ್ರೂಷೆಗೆಂದು ನೇಮಕ ಮಾಡಿದ್ದ ನರ್ಸ್ ಹಾಗೂ ಆಕೆಯ ಪತಿ ಕಳವು ಆರೋಪಿಗಳಾಗಿದ್ದಾರೆ. ನರ್ಸ್ ಅಪರ್ಣಾ ರುತ್ ವಿಲ್ಸನ್ ಹಾಗೂ ಆಕೆಯ ಪತಿ ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿರುವ ನರೇಶ್ ಕುಮಾರ್ ಸಾಗರ್ ರನ್ನು ಇದೀಗ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ನಿವಾಸದಲ್ಲಿ ಫೆಬ್ರವರಿ 11ರಂದು ಕಳವು ನಡೆದಿತ್ತು. ಆದರೆ ಸೋನಂ ಕಪೂರ್ ಅವರ ಮ್ಯಾನೇಜರ್ ಫೆಬ್ರವರಿ 23ರಂದು ತುಘಲಕ್ ರೋಡ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು. ಸೋನಂ ಕಪೂರ್ ಮತ್ತಾಕೆಯ ಪತಿ ಆನಂದ್ ಅಹುಜಾ ಈ ವೈಭವೋಪೇತ ನಿವಾಸದಲ್ಲಿ 20 ಮಂದಿ ಉದ್ಯೋಗಿಗಳಿದ್ದರು. ಈ ಎಲ್ಲರನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಮಂಗಳವಾರ ರಾತ್ರಿ ಸರಿತಾ ವಿಹಾರ್ ಎಂಬಲ್ಲಿನ ಮನೆಯ ಮೇಲೆ ದಾಳಿ ನಡೆಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ಬರೂ 31 ವರ್ಷ ವಯಸ್ಸಿನವರಾಗಿದ್ದು, ಕಳ್ಳತನಗೈದ ಬೆಲೆಬಾಳುವ ವಸ್ತುಗಳನ್ನು ಇನ್ನಷ್ಟೇ ವಶಪಡಿಸಿಕೊಳ್ಳಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.