3 ದಿನಗಳ ಅಂತರದಲ್ಲಿ 2 ಬಾರಿ ವಿವಾಹವಾದ ಯುವಕ 6ದಿನ ಸಂಸಾರ ನಡೆಸಿ 7ನೇ ದಿನಕ್ಕೆ ಎಸ್ಕೇಪ್!
Wednesday, April 6, 2022
ತುಮಕೂರು: ಹೆತ್ತವರ ವಿರೋಧದ ಮಧ್ಯೆಯೂ ದೇವಸ್ಥಾನದಲ್ಲಿ ಪ್ರೇಯಸಿಗೆ ದೇವಸ್ಥಾನದಲ್ಲಿ ತಾಳಿ ಕಟ್ಟಿರುವ ಯುವಕನೋರ್ವನು, ಮೂರು ದಿನದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಣಿಯನ್ನೂ ಮಾಡಿಸಿಕೊಂಡಿದ್ದ. ಬಳಿಕ ಈ ಜೋಡಿ 6 ದಿನಗಳ ಸಂಸಾರವನ್ನೂ ನಡೆಸಿತ್ತು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎನ್ನುವಾಗಲೇ ಯುವತಿ ಬಾಳಿನಲ್ಲಿ ನಡೆಯಬಾರದ್ದು ನಡೆದು ಹೋಗಿದೆ. ಪ್ರೀತಿಸಿ ಮದುವೆಯಾದ ಯುವತಿಯೀಗ ಬೀದಿಪಾಲಾಗಿದ್ದಾಳೆ.
ಪ್ರೀತಿಸಿದ ಹುಡುಗ ಜೀವನ ಪೂರ್ತಿ ತನ್ನೊಂದಿಗೆ ಸಂಗಾತಿಯಾಗಿ ಇರುತ್ತಾನೆ. ಇನ್ನು ತಮ್ಮದೇ ಬದುಕು ಕಟ್ಟಿಕೊಂಡು ನೆಲೆಯೂರಬೇಕು ಅಂದುಕೊಳ್ಳುವಷ್ಟರಲ್ಲಿ ಯುವತಿಯ ಬಾಳಿನಲ್ಲಿ ಭಾರೀ ಆಘಾತವೇ ಎದುರಾಗಿದೆ.
ತಿಪಟೂರು ತಾಲೂಕಿನ ಪರವಗೊಂಡನಹಳ್ಳಿ ಗ್ರಾಮದ ನಿಖಿಲ್ ಹಾಗೂ ಹಟ್ನ ಗ್ರಾಮದ ಚೈತ್ರಾ ಪರಸ್ಪರ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆ. ಇಬ್ಬರೂ ತುರುವೇಕೆರೆಯ ಮೊಬೈಲ್ ಶಾಪ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಇಬ್ಬರ ಮಧ್ಯೆ ಪ್ರೀತಿ ಮೊಳೆತಿದೆ. ಇವರಿಬ್ಬರ ಜಾತಿ ಬೇರೆ ಎಂಬ ಕಾರಣಕ್ಕೆ ಹೆತ್ತವರು ಮದುವೆಗೆ ಒಪ್ಪಿಗೆ ಕೊಟ್ಟಿರಲಿಲ್ಲ.
ಆದರೂ ಹೆತ್ತವರ ವಿರೋಧದ ಇವರಿಬ್ಬರೂ ಮನೆಯಿಂದ ಹೊರ ಬಂದು ಫೆಬ್ರವರಿ 4ರಂದು ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಫೆಬ್ರವರಿ 7ರಂದು ರಿಜಿಸ್ಟ್ರಾರ್ ಮ್ಯಾರೇಜ್ ಕೂಡ ಆಗಿದ್ದರು. ಅಲ್ಲದೆ ತಿಪಟೂರು ತಾಲೂಕು ಕಿಬ್ಬನಳ್ಳಿ ಬಳಿಯ ಇಂಡಿಸ್ಕೆರೆ ಗ್ರಾಮದ ಮನೆಯೊಂದರಲ್ಲಿ ಪ್ರೇಮಿಗಳಿಬ್ಬರೂ 6 ದಿನ ಒಟ್ಟಿಗೆ ಸಂಸಾರವನ್ನೂ ಮಾಡಿದ್ದರು. ಆದರೆ ಮದುವೆಯಾದ 7ನೇ ದಿನಕ್ಕೆ ಯುವಕ ಎಸ್ಕೇಪ್ ಆಗಿದ್ದಾನೆ.
ಫೆಬ್ರವರಿ 10ರಂದು ಇದ್ದಕ್ಕಿದ್ದಂತೆ ತಾಯಿಗೆ ಆರೋಗ್ಯ ಸರಿಯಿಲ್ಲವೆಂದು ಅವರನ್ನು ನೋಡಿಕೊಂಡು ಬರುವೆ ಎಂದು ನಿಖಿಲ್ ತಿಪಟೂರಿಗೆ ಹೋಗಿದ್ದಾನೆ. ಆದರೆ ಈವರೆಗೆ ವಾಪಸ್ ಬಂದಿಲ್ಲ. ಮನೆಗೆ ಹೋದ ಕೆಲವೇ ಗಂಟೆಗಳಲ್ಲಿ ನಿಖಿಲ್ನ ಎರಡೂ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಪತಿಯನ್ನು ಹುಡುಕಿಕೊಂಡು ಹೋದ ಚೈತ್ರಾಳಿಗೆ ನಿಖಿಲ್ ತಂದೆ ಬಸವರಾಜು ಅವಾಚ್ಯವಾಗಿ ನಿಂದಿಸಿದ್ದಾರೆ. ಕಂಗೆಟ್ಟ ಚೈತ್ರಾ, ಪತಿಯನ್ನು ಹುಡುಕಿಕೊಡುವಂತೆ ಕಿಬ್ಬನಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.