
ಅಧಿಕ ಲಾಭದ ಆಸೆಗೆ ಬಿದ್ದು, 4.4 ಕೋಟಿ ರೂ. ಕಳಕೊಂಡ ಖ್ಯಾತ ನಟಿ!
Saturday, April 2, 2022
ಮುಂಬೈ: ಒಂದೇ ಸಲಕ್ಕೆ ಅಧಿಕ ಲಾಭದ ಆಸೆಗೆ ಹೋಗಿ ಭಾರೀ ಮೋಸಕ್ಕೆ ಒಳಗಾಗುವವರ ಬಗ್ಗೆ ದಿನನಿತ್ಯವೂ ಸುದ್ದಿ ಆಗುತ್ತಲೇ ಇರುತ್ತದೆ. ಇದೇ ರೀತಿಯ ಆಸೆಗೆ ಬಿದ್ದ ಬಾಲಿವುಡ್ ನ ಖ್ಯಾತ ನಟಿ ರಿಮಿ ಸೇನ್ ಅವರು 4. 40 ರೂ. ಕಳೆದುಕೊಂಡಿದ್ದಾರೆ. ಇದೀಗ ಆಕೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ನಟಿ ರಿಮಿ ಸೇನ್ ಗೆ, ರೋಣಕ್ ಜಟಿನ್ ವ್ಯಾಸ್ ಎಂಬ ಗುರುಗಾಂವ್ ಮೂಲದ ವ್ಯಕ್ತಿಯೋರ್ವನು ಪರಿಚಯವಾಗಿದ್ದಾನೆ. ಆತ ಎಲ್‌ಇಡಿ ಬಲ್ಬ್ ಗಳ ವ್ಯವಹಾರ ಮಾಡುವುದಾಗಿ ನಟಿಗೆ ಹೇಳಿಕೊಂಡಿದ್ದಾನೆ. ಅಲ್ಲದೆ ಆ ಉದ್ಯಮದ ಮೇಲೆ ದೊಡ್ಡ ಮೊತ್ತದ ಹೂಡಿಕೆ ಮಾಡಿದರೆ ಶೇ.40 ಲಾಭ ತೆಗೆದುಕೊಡುವುದಾಗಿ ನಂಬಿಸಿದ್ದಾನೆಂದು ನಟಿ ದೂರಿದ್ದಾರೆ.
ಶೇ.40 ಲಾಭ ಎಂದಾಕ್ಷಣ ಅಧಿಕ ಲಾಭದ ಆಸೆಗೆ ಬಿದ್ದು ನಟಿ ರಿಮಿ 4.4 ಕೋಟಿ ರೂ. ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ ಆ ಬಳಿಕ ಆತ ನಾಪತ್ತೆ ಆಗಿದ್ದಾನೆ. ಇದೀಗ ಆತನ ಮೇಲೆ ರಿಮಿ ಸೇನ್ ದೂರು ದಾಖಲಿಸಿದ್ದಾರೆ.
'2019ರಲ್ಲಿ ಜಿಮ್‌ನಲ್ಲಿ ರೋಣಕ್ ನನಗೆ ಪರಿಚಯವಾಗಿದ್ದಾನೆ. ಆ ಬಳಿಕ ನಾವಿಬ್ಬರೂ ಗೆಳೆಯರಾದೆವು. 4.4 ಕೋಟಿ ರೂ. ಹಣವನ್ನು ನನ್ನಿಂದ ತೆಗೆದುಕೊಂಡಿದ್ದ ಆತ ಲಾಭದ ಜತೆಗೆ ಹಣ ಹಿಂದಿರುಗಿಸಲು ಒಂದು ಗಡುವು ನೀಡಿದ್ದ. ಆದರೆ ಆ ಬಳಿಕವೂ ಆತ ಹಣವೂ ನೀಡಿಲ್ಲ, ಆತ ನನ್ನ ಕರೆಯನ್ನೂ ಸ್ವೀಕರಿಸುತ್ತಿಲ್ಲ' ಎಂದು ನಟಿ ರಿಮಿ ಸೇನ್ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರದಂದು ಮುಂಬೈ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತನಿಖೆಯಲ್ಲಿ ರೋಣಕ್ ಯಾವುದೇ ಉದ್ಯಮ ಹೊಂದಿರಲಿಲ್ಲ. ನಟಿಯಿಂದ ಹಣ ಕೀಳುವುದೊಂದೇ ಆತನ ಉದ್ದೇಶ ಆಗಿತ್ತು ಎಂದು ತಿಳಿದುಬಂದಿದೆ.