ಮಂಗಳೂರು: ಕೊನೆಯ ಪ್ರಯಾಣಿಕ ಇಳಿದ 5 ಸೆಕೆಂಡ್ ನಲ್ಲಿ ಬಸ್ ಬೆಂಕಿಗಾಹುತಿ: ಭಾರೀ ದುರಂತ ತಪ್ಪಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
Saturday, April 9, 2022
ಮಂಗಳೂರು: ನಗರದ ಹಂಪನಕಟ್ಟೆಯ ಸಿಗ್ನಲ್‌ನಲ್ಲಿ ನಿನ್ನೆ ನಡೆದ ಬೈಕ್ - ಬಸ್ ಅಪಘಾತದಲ್ಲಿ ಭಾರೀ ದುರಂತವೊಂದು ತಪ್ಪಿರುವ ಕೊನೆಯ ಕ್ಷಣದ ವೀಡಿಯೋ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಇದೀಗ ಘಟನೆಯಲ್ಲಿ ಬಸ್ ಸಂಪೂರ್ಣ ಬೆಂಕಿಗಾಹುತಿಯಾಗುವ ಮುನ್ನ ಚಾಲಕ, ನಿರ್ವಾಹಕರು ಸೇರಿದಂತೆ 28 ಮಂದಿ ಪ್ರಯಾಣಿಕರು ಕೂದಲೆಳೆಯ ಅಂತರದಲ್ಲಿ ಪಾರಾಗಿರುವ ಸಿಸಿ ಕ್ಯಾಮರಾ ದೃಶ್ಯವೊಂದು ಲಭ್ಯವಾಗಿದೆ.
ಹೌದು ನಿನ್ನೆ ಮಧ್ಯಾಹ್ನ 2.30ರ ಸುಮಾರಿಗೆ ಹಂಪನಕಟ್ಟೆ ಸಿಗ್ನಲ್ ಬಳಿ ಖಾಸಗಿ ಸಿಟಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಅಪಘಾತ ನಡೆದ ಕೆಲವೇ ಸೆಕೆಂಡುಗಳಲ್ಲಿ ಎರಡೂ ವಾಹನಗಳು ಬೆಂಕಿಗಾಹುತಿಯಾಗಿತ್ತು ಘಟನೆ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಬಸ್ ಗೆ ಬೆಂಕಿ ತಗುಲುತ್ತಿದ್ದಂತೆ ಪ್ರಯಾಣಿಕರು ಬಸ್ನಿಂದ ಲಗುಬಗೆಯಿಂದ ಇಳಿಯುತ್ತಿರುವ ವೀಡಿಯೋ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಕೊನೆಯ ಪ್ರಯಾಣಿಕ ಇಳಿದ ಕೇವಲ ಐದೇ ಸೆಕೆಂಡ್ನಲ್ಲಿ ಇಡೀ ಬಸ್ಗೆ ಬೆಂಕಿ ವ್ಯಾಪಿಸಿದೆ. ಈ ಭಯಾನಕ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನೋಡನೋಡುತ್ತಿದ್ದಂತೆ ಬಸ್ ಗೆ ನಡುರಸ್ತೆಯಲ್ಲಿಯೇ ಬೆಂಕಿ ಹತ್ತಿಕೊಂಡಿದೆ. ತಕ್ಷಣ ಜಾಗೃತರಾದ ಬಸ್ ಚಾಲಕ ಬಸ್ ನಿಲ್ಲಿಸಿ ಇಳಿದಿದ್ದಾರೆ. ಅಲ್ಲದೆ ಚಾಲಕ ಹಾಗೂ ನಿರ್ವಾಹಕ ಎಲ್ಲಾ ಪ್ರಯಾಣಿಕರನ್ನು ಬಸ್ ನಿಂದ ತಕ್ಷಣ ಇಳಿಸಿದ್ದಾರೆ. ಪ್ರಯಾಣಿಕರೆಲ್ಲರೂ ಲಗುಬಗೆಯಿಂದ ಬಸ್ ನಿಂದ ಇಳಿದು ಓಡುತ್ತಿರುವ ದೃಶ್ಯ ವೀಡಿಯೋದಲ್ಲಿ ದಾಖಲಾಗಿದೆ. ಪರಿಣಾಮ ಯಾರಿಗೂ ಅಪಾಯವಾಗಿಲ್ಲ. ಬಸ್ನಲ್ಲಿದ್ದ ಕೊನೆಯ ಪ್ರಯಾಣಿಕ ಇಳಿದ ಐದೇ ಸೆಕೆಂಡ್ನಲ್ಲಿ ಇಡೀ ಬಸ್ಗೆ ಬೆಂಕಿ ವ್ಯಾಪಿಸಿದೆ. ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.