ಪಾಲಿಶ್ ಮಾಡುತ್ತೇವೆಂದು ಹೇಳಿ ಪಡೆದ 70 ಗ್ರಾಂ ಮಾಂಗಲ್ಯ ಸರದೊಂದಿಗೆ ದುಷ್ಕರ್ಮಿಗಳು ಮಂಗಮಾಯ: ವಂಚಕರಿದ್ದಾರೆ ಹುಷಾರ್....!
Sunday, April 3, 2022
ಸೊರಬ: ಮಹಿಳೆಯರಿಗೆ ಚಿನ್ನಾಭರಣಗಳ ಮೇಲಿನ ಮೋಹ ಯಾವತ್ತಿಗೂ ಕಡಿಮೆಯಾಗುವುದಿಲ್ಲ. ಅದಲ್ಲದೆ ತಮ್ಮ ಮೈಮೇಲಿನ ಒಡವೆಗಳು ಮತ್ತೊಬ್ಬರ ಕಣ್ಣು ಕುಕ್ಕುವಂತೆ ಹೊಳೆಯುತ್ತಿರಬೇಕೆಂಬ ಎಂಬ ಆಸೆ ಬೇರೆ. ಇಂಥಹ ಆಸೆಗೆ ಬಪಿ ಬಿದ್ದ ಮಹಿಳೆ 80 ಗ್ರಾಂ ಚಿನ್ನಾಭರಣವನ್ನು ಕಳೆದುಕೊಂಡಿದ್ದಾರೆ.
ಸೊರಬ ತಾಲೂಕಿನ ಆನವಟ್ಟಿ ನೆಹರು ನಗರದ ನಂದಾ (54) ಎಂಬಾಕೆಯೇ ಒಡವೆ ಕಳೆದುಕೊಂಡ ಮಹಿಳೆ.
ನಂದಾ ಎಂಬವರ ಮನೆಗೆ ಬಂದಿರುವ ಅಪರಿಚಿತರಿಬ್ಬರು ನಿಮ್ಮ ಮನೆಯಲ್ಲಿ ಬೆಳ್ಳಿ, ಬಂಗಾರದ ಒಡವೆಗಳು ಇದ್ದರೆ ಪಾಲಿಶ್ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ. ವಂಚಕರ ಮಾತನ್ನು ನಂಬಿದ ಮಹಿಳೆ ಮನೆಯಲ್ಲಿದ್ದ ಬೆಳ್ಳಿಯ ಒಡವೆಗಳನ್ನು ಕೊಟ್ಟಿದ್ದಾರೆ. ಈ ಬೆಳ್ಳಿ ಒಡವೆಗಳನ್ನು ಅವರು ಫಳ ಫಳ ಹೊಳೆಯುವಂತೆ ಪಾಲಿಶ್ ಮಾಡಿಕೊಟ್ಟಿದ್ದಾರೆ. ಬೆಳ್ಳಿ ಒಡವೆಗಳು ಹೊಳೆಯುವಂತೆ ಮಾಡಿ ಕೊಟ್ಟಿರುವುದನ್ನು ಕಂಡು ಸಂತಸಗೊಂಡ ಆಕೆ, ತಮ್ಮ ಕೊರಳಲ್ಲಿದ್ದ 70 ಗ್ರಾಂ ತೂಕದ ಬಂಗಾರದ ಸರ ಮತ್ತು ಹತ್ತು ಗ್ರಾಂ ತೂಕದ ಉಂಗುರವನ್ನು ಪಾಲಿಶ್ ಮಾಡಲು ಕೊಟ್ಟಿದ್ದಾರೆ.
ಅಪರಿಚಿತ ವ್ಯಕ್ತಿಗಳು ನಂದಾ ಅವರ ಸಮ್ಮುಖದಲ್ಲಿ ಒಂದು ಕುಕ್ಕರ್‌ನಲ್ಲಿ ಒಡವೆಗಳನ್ನು ಹಾಗೂ ಅರಿಶಿಣಪುಡಿ, ನೀರನ್ನು ಹಾಕಿ ವಂಚಕರು, ಅದನ್ನು ಗ್ಯಾಸ್ ಸ್ಟವ್ ಮೇಲೆ ಇಟ್ಟು 30 ನಿಮಿಷ ಬಿಸಿ ಮಾಡಿ ಬಳಿಕ ಅದನ್ನು ತೆಗೆಯಿರಿ ಎಂದು ಹೇಳಿದ್ದಾರೆ. ವಂಚಕರು ಹೇಳಿದಂತೆ 30 ನಿಮಿಷದ ಬಳಿಕ ಕುಕ್ಕರ್ ತೆಗೆದು ನೋಡಿದರೆ ಚಿನ್ನ ಹೊಳೆಯುವುದಿರಲಿ ಮಂಗ ಮಾಯ ಅಗಿದೆ. ಆಗ ಅವರಿಗೆ ತಾವು ಮೋಸ ಹೋಗಿರುವುದು ತಿಳಿದು ಬಂದಿದೆ.
ಈ ಬಗ್ಗೆ ಆಕೆ ಆನವಟ್ಟಿ ಠಾಣೆಗೆ ದೂರು ನೀಡಿದ್ದಾರೆ. ಒಡವೆ ಪಾಲಿಶ್ ಮಾಡಿಕೊಡುವ ನೆಪದಲ್ಲಿ ಮನೆಯಲ್ಲಿ ಒಂಟಿಯಾಗಿರುವ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ವಂಚನೆ ಮಾಡುವ ಪ್ರಕರಣಗಳು ಹೊಸದೇನಲ್ಲ. ಆದರೆ ಪದೇಪದೆ ಈ ಜಾಲಕ್ಕೆ ಮಹಿಳೆಯರು ಬಲಿಯಾಗುತ್ತಿದ್ದಾರೆ.