ಉದ್ಯಮಿ ಹತ್ಯೆ ಪ್ರಕರಣ: ಬನ್ನಂಜೆ ರಾಜಾ ಸೇರಿ 8ಮಂದಿಗೆ ಜೀವಾವಧಿ ಶಿಕ್ಷೆ
Monday, April 4, 2022
ಬೆಳಗಾವಿ: 7-8 ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ ಉದ್ಯಮಿ, ಬಿಜೆಪಿ ಮುಖಂಡ ಆರ್.ಎನ್. ನಾಯ್ಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಕಾ(ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ನ್ಯಾಯಾಲಯ, ಭೂಗತ ಪಾತಕಿ ಬನ್ನಂಜೆ ರಾಜಾ ಸಹಿತ 8 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ.
ಆರ್.ಎನ್. ನಾಯ್ಕ್ ಹತ್ಯೆ ಪ್ರಕರಣದ ಆರೋಪಿಗಳಲ್ಲಿ 9ನೇ ಆರೋಪಿಯಾದ ಬನ್ನಂಜೆ ರಾಜಾ, ಉತ್ತರ ಪ್ರದೇಶ ಮೂಲದ ಜಗದೀಶ್ ಪಟೇಲ್, ವಿಜಯಪುರದ ಅಂಬಾಜಿ ಬಂಡುಗೋರ್, ಕಾರ್ಕಳದ ಮಂಜುನಾಥ ನಾರಾಯಣ ಭಟ್, ಅಚ್ಚಂಗಿ ಮಹೇಶ್, ಸುಳ್ಯ ಸಂತೋಷ್, ಜಗದೀಶ್ ಚಂದ್ರರಾಜ್ ಅರಸ್, ಅಂಕಿತ್ ಕುಮಾರ್ ಕಶ್ಯಪ್ ಎಂಬ ಎಂಟು ಮಂದಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಕೇರಳದ ಕೆ.ಎಂ.ಇಸ್ಮಾಯೀಲ್ ಎಂಬಾತನಿಗೆ 5 ವರ್ಷ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಆರೋಪಿಗಳನ್ನು ದೋಷಿ ಎಂದು ಪರಿಗಣಿಸಿರುವ ನ್ಯಾಯಾಲಯ ಓರ್ವನಿಗೆ 5 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ. ಉಳಿದ ಎಂಟು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಅಂಕೋಲಾದ ಉದ್ಯಮಿಯಾಗಿದ್ದ ಆರ್.ಎನ್. ನಾಯ್ಕ್ ಅವರನ್ನು 2013ರ ಡಿಸೆಂಬರ್ 21ರಂದು ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.