ಬೆಂಗಳೂರು ಅಪ್ರಾಪ್ತೆಯ ಮೇಲೆ 8ಮಂದಿ ಕಾಮುಕರಿಂದ ನಿರಂತರ ಅತ್ಯಾಚಾರ: ವೀಡಿಯೋ ತೋರಿಸಿ ಬೆದರಿಕೆ
Saturday, April 9, 2022
ಬೆಂಗಳೂರು: ಅಪ್ರಾಪ್ತ ವಯಸ್ಕ ಬಾಲಕಿಯರ ಮೇಲೆ ಕಾಮುಕರ ಮೃಗೀಯ ದೌರ್ಜನ್ಯಕ್ಕೆ ಕಡಿವಾಣ ಇಲ್ಲದಂತಾಗಿದೆ. ಇದೀಗ ಬೆಂಗಳೂರು ನಗರದಲ್ಲಿ ಅಪ್ರಾಪ್ತೆಯೊರ್ವಳ ಮೇಲೆ ಎಂಟು ಮಂದಿಯ ಪಾತಕೀ ಕೃತ್ಯ ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಅಪ್ರಾಪ್ತೆಯೋರ್ವಳನ್ನು ಬೆದರಿಸಿ 8 ಜನ ನಿರಂತರ ಸಾಮೂಹಿಕ ಅತ್ಯಾಚಾರ ಎಸಗಿರುವ ಆತಂಕಕಾರಿ ಘಟನೆಯೊಂದು ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರಂಭದಲ್ಲಿ ಇಬ್ಬರು ಆರೋಪಿಗಳು 16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಅಲ್ಲದೆ ಅದರ ವೀಡಿಯೋ ಚಿತ್ರೀಕರಿಸಿಕೊಂಡಿದ್ದರು. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡೋದಾಗಿ ಬೆದರಿಸಿದ್ದಾರೆ. ಬಳಿಕ ಆ ವೀಡಿಯೋವನ್ನು ತೋರಿಸಿ ಬಾಲಕಿಯನ್ನು ಬೆದರಿಸಿ ಎಂಟು ಜನ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಬಾಲಕಿ ಅಳುತ್ತಿರುವುದನ್ನು ಗಮನಿಸಿ ಪೋಷಕರು ಪ್ರಶ್ನಿಸಿದ್ದಾರೆ. ಆಗ ಬಾಲಕಿ ಕಬಾಬ್ ಖಾರವಿತ್ತು, ಅದಕ್ಕೆ ಅಳುತ್ತಿದ್ದೆ ಎಂದು ಆರಂಭದಲ್ಲಿ ಸುಳ್ಳು ಹೇಳಿದ್ದಾಳೆ. ಬಳಿಕ ಆಕೆಯನ್ನು ನಿಧಾನವಾಗಿ ವಿಚಾರಿಸಿದಾಗ ಪ್ರಕರಣ ಬಯಲಾಗಿದೆ. ತಕ್ಷಣ ಬಾಲಕಿಯ ತಾಯಿ ಯಲಹಂಕ ಠಾಣೆಗೆ ದೂರು ನೀಡಿದ್ದಾರೆ.
ತಕ್ಷಣ ಪೊಕ್ಸೊ, ಅತ್ಯಾಚಾರ, ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಒಟ್ಟು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.