ಒಂದೇ ಸಂಸ್ಥೆಯಲ್ಲಿ ಬರೋಬ್ಬರಿ 84 ವರ್ಷಗಳ ಕಾಲ ಕೆಲಸ ನಿರ್ವಹಿಸಿದ ವ್ಯಕ್ತಿ: ಗಿನ್ನೆಸ್ ದಾಖಲೆಯಲ್ಲಿ ಸ್ಥಾನ
Thursday, April 28, 2022
ಬ್ರೆಜಿಲಿಯಾ: ಯಾವನೇ ವ್ಯಕ್ತಿಯೋರ್ವನು ಒಂದೇ ಸಂಸ್ಥೆಯಲ್ಲಿ ಸರಾಸರಿ ಎಷ್ಟು ವರ್ಷ ದುಡಿಯಬಹುದು ಎಂದು ಲೆಕ್ಕ ಹಾಕಿದರೆ, ಗರಿಷ್ಠವೆಂದರೆ 30 ವರ್ಷ ಎಂದು ಅಂದಾಜಿಸಬಹುದು. ಆದರೆ ಇಷ್ಟೆಲ್ಲಾ ವರ್ಷ ಒಂದೇ ಕಡೆ ಕೆಲಸ ಮಾಡುವುವವರು ಸಿಗೋದು ಮಾತ್ರ ಅತೀ ವಿರಳ. ಆದರೆ ಇಲ್ಲೋರ್ವರು ಬರೋಬ್ಬರಿ 84 ವರ್ಷಗಳ ಕಾಲ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡಿ ಎಲ್ಲರೂ ಅಬ್ಬಬ್ಬಾ ಎಂದು ಅಚ್ಚರಿ ಪಡುವಂತೆ ಮಾಡಿದ್ದಾರೆ.
ಒಂದೇ ಸಂಸ್ಥೆಯಲ್ಲಿ ಸತತ 84 ವರ್ಷಗಳ ಕಾಲ ಕೆಲಸ ಮಾಡುವ ಮೂಲಕ 100 ವರ್ಷದ ಈ ವ್ಯಕ್ತಿ ಗಿನ್ನಿಸ್ ದಾಖಲೆಯಲ್ಲೂ ಸ್ಥಾನ ಪಡೆದಿದ್ದಾರೆ. ಹೌದು ಬ್ರೆಜಿಲ್ನ ವಾಲ್ಟರ್ ಆರ್ಥೊಮನ್ ಎಂಬವರೇ ಈ ವ್ಯಕ್ತಿ. ಇವರು ಬ್ರೆಜಿಲ್ ನ ಸ್ಯಾಂಟಾ ಕ್ಯಾಟರಿನಾ ನಗರದಲ್ಲಿರುವ ಟೆಕ್ಸ್ಟೈಲ್ಸ್ ಕಂಪೆನಿಗೆ 1938ರಲ್ಲಿ ಉದ್ಯೋಗಕ್ಕೆಂದು ಸೇರಿಕೊಳ್ಳುತ್ತಾರೆ. ಆಗ ಇವರ ವಯಸ್ಸು ಕೇವಲ 15 ವರ್ಷವಂತೆ. ಅಂದಿನಿಂದ ಇಂದಿನವರೆಗೂ ಇದೇ ಸಂಸ್ಥೆಯಲ್ಲಿ ಇವರು ಕೆಲಸ ಮಾಡುತ್ತಿದ್ದಾರೆ.
ವಯಸ್ಸು ನೂರು ವರ್ಷವನ್ನು ದಾಟಿದ್ದರೂ ವಾಲ್ಟರ್ ಆರ್ಥೊಮನ್ ಉತ್ಸಾಹ ಇನ್ನೂ ಕುಂದಿಲ್ಲ. ಬರೋಬ್ಬರಿ 84 ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದ ಹಿನ್ನೆಲೆಯಲ್ಲಿ ಇವರಿಗಾಗಿಯೇ ಕಂಪೆನಿ ವಿಶೇಷ ಆಚರಣೆಯನ್ನೂ ಮಾಡಿತ್ತು.