-->
ನಕಲಿ‌ ಎಸ್ಸಿ-ಎಸ್ಟಿ ಪ್ರಮಾಣ ಪತ್ರ: 89 ಸರಕಾರಿ ನೌಕರರು ವಜಾ, 1097 ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ

ನಕಲಿ‌ ಎಸ್ಸಿ-ಎಸ್ಟಿ ಪ್ರಮಾಣ ಪತ್ರ: 89 ಸರಕಾರಿ ನೌಕರರು ವಜಾ, 1097 ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ

ಮಂಗಳೂರು: ನಕಲಿ ಎಸ್ಸಿ - ಎಸ್ಟಿ ಜಾತಿ ಪ್ರಮಾಣ ಪತ್ರದ ಮೂಲಕ ಸರಕಾರಕ್ಕೆ ವಂಚನೆಗೈದಿರುವ ಆರೋಪದ ಮೇಲೆ 89 ಸರಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿದೆ‌. ಅಲ್ಲದೆ 1097ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಜಾರಿಗೊಳಿಸಲಾಗಿದೆ ಎಂದು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿ ಡಾ.ರವೀಂದ್ರನಾಥ್ ತಿಳಿಸಿದ್ದಾರೆ.

ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣವನ್ನು ಸೃಷ್ಟಿಸಿ ಸರಕಾರಿ ಇಲಾಖೆ ಹಾಗೂ ಇತರೆಡೆಗಳಲ್ಲಿ ಲಾಭ ಪಡೆಯುವ ಉದ್ದೇಶದಿಂದ ವಂಚನೆ ಮಾಡಿರುವ ಆರೋಪಿಗಳ ವಿರುದ್ಧ ದೂರುಗಳನ್ನು ಪರಿಶೀಲಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ವಿತರಿಸಿರುವ 111ತಹಶೀಲ್ದಾರ್, 108 ಕಂದಾಯ ನಿರೀಕ್ಷಕರು, 107 ಗ್ರಾಮ ಲೆಕ್ಕಿಗರ ವಿರುದ್ಧ ಪ್ರಕರಣ ದಾಖಲಾಗಿದೆ. ಅದಲ್ಲದೆ ತಹಶೀಲ್ದಾರ್ ಗಳ ವಿರುದ್ಧ ಕಟ್ಟುನಿಟ್ಟಿನ ಶಿಸ್ತುಕ್ರಮ ಕೈಗೊಳ್ಳುವಂತೆ ಒಟ್ಟು 165 ಪ್ರಕರಣಗಳಲ್ಲಿ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಡಾ.ರವೀಂದ್ರನಾಥ್ ತಿಳಿಸಿದ್ದಾರೆ.

ಎಸ್ಸಿ - ಎಸ್ಟಿ ನಕಲಿ‌ಜಾತಿ ಪ್ರಮಾಣ ಪತ್ರ ಪಡೆದಿರುವುದು ಸಾಬೀತಾಗಿರುವ ಒಟ್ಟು 51 ಪ್ರಕರಣಗಳಲ್ಲಿ ವಿವಿಧ ಜಾತಿ ಪರಿಶೀಲನಾ ಸಮಿತಿಯಲ್ಲಿ  20 ವರ್ಷಗಳಿಂದ ಇತ್ಯರ್ಥಪಡಿಸದೆ ಬಾಕಿ ಉಳಿದಿದೆ‌. ಇದರಿಂದ ಶೋಷಿತ ಸಮುದಾಯದವರು ಸೌಲಭ್ಯ ವಂಚಿತರಾಗುತ್ತಿದ್ದಾರೆ. ಯಾರಾದರೂ ನಕಲಿ ಜಾತಿ ಪ್ರಮಾಣ ಪ್ರತ್ರಗಳನ್ನು ನಕಲಿ ಮಾಡಿ ಲಾಭ ಪಡೆಯಲು ಉದ್ದೇಶಿಸಿರೋದು ತಿಳಿದು ಬಂದಲ್ಲಿ ಅವರ ವಿರುದ್ಧ ಜಿಲ್ಲಾಡಳಿತ ಅಥವಾ ಸಮಾಜ ಕಲ್ಯಾಣ ಇಲಾಖೆಗೆ ದೂರು ನೀಡಬಹುದು. ಆ ದೂರಿನ ಪ್ರತಿಯನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಿದರೆ ಪರಿಶೀಲನೆ ನಡೆಸಿ ಪ್ರಕ್ರಿಯೆ ಕೈಗೆತ್ತಿಕೊಳ್ಳುತ್ತೇವೆ ಎಂದು ಡಾ.ರವೀಂದ್ರನಾಥ್ ಹೇಳಿದರು.

Ads on article

Advertise in articles 1

advertising articles 2

Advertise under the article