-->
ಮಂಗಳೂರು: ಡಿವೈಡರ್ ದಾಟಿ ಮತ್ತೊಂದೆಡೆ ಸಂಚರಿಸುತ್ತಿದ್ದ ನಾಲ್ಕು ವಾಹನಗಳಿಗೆ ಸರಣಿ ಅಪಘಾತ ನಡೆಸಿದ ಬಿಎಂಡಬ್ಲ್ಯು ಕಾರು; ಇಬ್ಬರಿಗೆ ಗಾಯ

ಮಂಗಳೂರು: ಡಿವೈಡರ್ ದಾಟಿ ಮತ್ತೊಂದೆಡೆ ಸಂಚರಿಸುತ್ತಿದ್ದ ನಾಲ್ಕು ವಾಹನಗಳಿಗೆ ಸರಣಿ ಅಪಘಾತ ನಡೆಸಿದ ಬಿಎಂಡಬ್ಲ್ಯು ಕಾರು; ಇಬ್ಬರಿಗೆ ಗಾಯ

ಮಂಗಳೂರು: ಅತಿವೇಗದಿಂದ ಸಂಚರಿಸುತ್ತಿದ್ದ ಬಿಎಂಡಬ್ಲ್ಯು ಕಾರೊಂದು ಡಿವೈಡರ್ ದಾಟಿ ಮತ್ತೊಂದು ಬದಿಯಲ್ಲಿ ಸಂಚಾರ ಮಾಡುತ್ತಿದ್ದ ದ್ವಿಚಕ್ರ ವಾಹನಗಳು ಹಾಗೂ ಕಾರುಗಳಿಗೆ ಸರಣಿ ಅಪಘಾತ ನಡೆಸಿರುವ ಘಟನೆಯೊಂದು ಮಂಗಳೂರಿನ ಬಳ್ಳಾಲ್ ಭಾಗ್ ನಲ್ಲಿ ಇಂದು ಮಧ್ಯಾಹ್ನ 1.20 ಸುಮಾರಿಗೆ ಸಂಭವಿಸಿದೆ. ಅಪಘಾತದಲ್ಲಿ ಸ್ಕೂಟರ್ ಸವಾರೆ ಮಹಿಳೆ ಹಾಗೂ ಮತ್ತೊಂದು ಕಾರಿನಲ್ಲಿದ್ದ ಓರ್ವ ಬಾಲಕ ಗಾಯಗೊಂಡಿದ್ದಾರೆ.


ಇಂಟಿರೀಯರ್ ಡೆಕೊರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಣ್ಣಗುಡ್ಡ ನಿವಾಸಿ ಶ್ರವಣ್ ಕುಮಾರ್ (30) ಅತಿವೇಗದಿಂದ ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರು ಬಲ್ಲಾಳ್ ಬಾಗ್ ನಲ್ಲಿ ಆತನ ನಿಯಂತ್ರಣಕ್ಕೆ ಸಿಗದೆ ಡಿವೈಡರ್ ದಾಟಿ ಮತ್ತೊಂದು ಕಡೆಗೆ ಜಂಪ್ ಆಗಿದೆ. ಪರಿಣಾಮ ಮತ್ತೊಂದು ಕಡೆಯಲ್ಲಿ ಸಂಚರಿಸುತ್ತಿದ್ದ ಎರಡು ದ್ವಿಚಕ್ರ ವಾಹನಗಳು, ಎರಡು ಕಾರುಗಳಿಗೆ ಢಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ.


ಅಪಘಾತದಲ್ಲಿ ಎರಡು ಕಾರುಗಳ ಮಧ್ಯೆ ಸಿಲುಕಿರುವ ಸ್ಕೂಟರ್ ಸವಾರೆ ಪ್ರೀತಿ ಮನೋಜ್(47) ಗಂಭೀರವಾಗಿ ಗಾಯಗೊಂಡಿದ್ದಾರೆ. ಆಕೆಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಅಲ್ಲದೆ ಅಪಘಾತದಿಂದ ಮತ್ತೊಂದು ಕಾರ್ ನಲ್ಲಿದ್ದ ಅಮಯ್ ಜಯದೇವನ್ (7) ಎಂಬ ಬಾಲಕನೂ ಗಾಯಗೊಂಡಿದ್ದಾನೆ. ಆತನಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತದ ಸ್ಥಳದಲ್ಲಿ ಜಮಾಯಿಸಿದ ಜನರು ಬಿಎಂಡಬ್ಲ್ಯು ಕಾರು ಚಾಲಕನನ್ನು ಕಾರಿನಿಂದ ಎಳೆದು ಹಾಕಿ ಮಾರ್ಗದಲ್ಲಿ ಹೊರಳಾಡಿಸಿ ಥಳಿಸಿದ್ದಾರೆ. ಅಪಘಾತದ ಸಂದರ್ಭದ ಭೀಕರ ದೃಶ್ಯ ಹಾಗೂ ಜನರು ಕಾರು ಚಾಲಕ ಯುವಕನನ್ನು ಥಳಿಸುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. 


ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಆತ ಪಾನಮತ್ತನಾಗಿ ಕಾರು ಚಲಾಯಿಸಿದ್ದನೆಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಿದೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article