
ಸ್ನೇಹಿತನ ಮೃತದೇಹವನ್ನು ಊರಿಗೆ ಕೊಂಡೊಯ್ಯುತ್ತಿದ್ದ ಮೂವರು ಅಪಘಾತಕ್ಕೆ ಬಲಿ!
Thursday, April 21, 2022
ರಾಯಚೂರು: ಸ್ನೇಹಿತನ ಮೃತದೇಹವನ್ನು ಬೆಂಗಳೂರಿನಿಂದ ಊರಿಗೆ ಕೊಂಡೊಯ್ಯುತ್ತಿದ್ದ ಮೂವರು ಮಿತ್ರರು ಮಾರ್ಗಮಧ್ಯೆ ಭೀಕರ ಅಪಘಾತಕ್ಕೊಳಗಾಗಿ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆಯೊಂದು ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗೊಲ್ಲಪಲ್ಲಿ ಬಳಿ ನಡೆದಿದೆ.
ಅಂಬರೀಷ್ (30), ಗೋವಿಂದ್ (35) ದೇವರಾಜ್ (34) ಅಪಘಾತದಲ್ಲಿ ಮೃತಪಟ್ಟ ಸ್ನೇಹಿತರು. ಕಾರು ಚಾಲಕ ಉಸ್ಮಾನ್ ಪಾಷಾ ಹಾಗೂ ಯಲ್ಲಾಲಿಂಗ ಎಂಬವರಿಗೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ದುರ್ದೈವಿಗಳು ಹಾಗೂ ಗಾಯಾಳುಗಳು ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.
ಮೃತಪಟ್ಟವರ ಸ್ನೇಹಿತ ಬಸಯ್ಯ ಎಂಬಾತ ನಿನ್ನೆ ಬೆಂಗಳೂರಿನಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದ. ಆತನ ಮೃತದೇಹವನ್ನು ನಿನ್ನೆ ರಾತ್ರಿ ಅವರು ಬೆಂಗಳೂರಿನಿಂದ ಯಾದಗಿರಿ ಜಿಲ್ಲೆಯ ವಡಗೇರಾ ಎಂಬಲ್ಲಿಗೆ ಕೊಂಡೊಯ್ಯುತ್ತಿದ್ದರು. ಮೃತದೇಹವನ್ನು ಕೊಂಡೊಯ್ಯಲು ಬೆಂಗಳೂರಿನಿಂದ ಮೂರು ಕಾರು ಹಾಗೂ ಒಂದು ಆ್ಯಂಬುಲೆನ್ಸ್ನಲ್ಲಿ ಹೊರಟಿದ್ದರು. ಆ ಪೈಕಿ ಒಂದು ಕಾರು ಪಂಕ್ಚರ್ ಆಗಿ ಹಿಂದೆ ಉಳಿದಿತ್ತು. ಆದರೆ ಮಾರ್ಗಮಧ್ಯೆ ಎದುರಿನಿಂದ ಬರುತ್ತಿದ್ದ ಇನ್ನೊಂದು ಕಾರು ಮತ್ತು ಇವರಿದ್ದ ಕಾರು ಮುಖಾಮುಖಿ ಡಿಕ್ಕಿ ಆಗಿದ್ದವು. ಡಿಕ್ಕಿಯ ರಭಸಕ್ಕೆ ಕಾರು ಜಖಂಗೊಂಡಿದ್ದು ರಸ್ತೆಯಾಚೆಗೆ ಪಲ್ಟಿಯಾಗಿತ್ತು. ಪರಿಣಾಮ ಮೂವರು ಸ್ನೇಹಿತರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.