ಮದ್ಯದ ಮತ್ತಿನಲ್ಲಿ ನೇಪಾಳಿ ಮಹಿಳೆಯನ್ನು ಅತ್ಯಾಚಾರಕ್ಕೆ ಯತ್ನಿಸಿದ ರೌಡಿಶೀಟರ್ ಅರೆಸ್ಟ್
Saturday, April 2, 2022
ಬೆಂಗಳೂರು: ಮದ್ಯದ ಮತ್ತಿನಲ್ಲಿ ನೇಪಾಳಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಗಡಿಪಾರಾಗಿದ್ದ ನಟೋರಿಯಸ್ ರೌಡಿ ಶೀಟರ್ ನನ್ನು ಡಿ.ಜೆ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕಮರ್ಷಿಯಲ್ ಸ್ಟ್ರೀಟ್ ರೌಡಿ ಶೀಟರ್ ಆಗಿರುವ ಅವೇಝ್ ನನ್ನು ಪೊಲೀಸರು ಗಡಿಪಾರು ಮಾಡಿದ್ದರು. ಆದರೆ ಮೊನ್ನೆ ತಡರಾತ್ರಿ ಡಿ.ಜೆ. ಹಳ್ಳಿಯ ಮುನಿಯಪ್ಪ ಬ್ಲಾಕ್ ನಲ್ಲಿ ಕಾಣಿಸಿಕೊಂಡಿದ್ದ ಅವೇಝ್, ಕುಡಿದ ಮತ್ತಲ್ಲಿ ನೇಪಾಳಿ ಕುಟುಂಬವೊಂದು ವಾಸವಿದ್ದ ಮನೆಗೆ ನುಗ್ಗಿದ್ದಾನೆ.
ಈ ವೇಳೆ ಸಂತ್ರಸ್ತ ಮಹಿಳೆಯ ಪತಿ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಹೋಗಿದ್ದರು. ಆಗ ಮಹಿಳೆ ಒಬ್ಬಳೇ ಇದ್ದರು. ಆದ್ದರಿಂದ ಮನೆಯೊಳಗೆ ನುಗ್ಗಿದ ಅವೇಝ್ ಆಕೆಯ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅಲ್ಲದೆ ಮಹಿಳೆ ಮೈ, ಕೈಯನ್ನು ಕಚ್ಚಿ ರೌಡಿ ಶೀಟರ್ ಅವೇಜ್ ಕ್ರೌರ್ಯ ಮೆರೆದಿದ್ದಾನೆ. ಸದ್ಯ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ರೌಡಿ ಶೀಟರ್ ಅವೇಝ್ ನನ್ನು ಡಿಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.