ಮಂಗಳೂರು: ಪ್ರಾಧ್ಯಾಪಕಿ ಬಗ್ಗೆ ಮಾನ ಹಾನಿಯಾಗುವಂತೆ, ಅಶ್ಲೀಲವಾಗಿ ಭಿತ್ತಿ ಪತ್ರ ಅಂಟಿಸಿ, ಪತ್ರ ಬರೆದ ಮೂವರು ಆರೋಪಿಗಳು ಅಂದರ್
Wednesday, April 20, 2022
ಮಂಗಳೂರು: ನಗರದ ಪ್ರತಿಷ್ಠಿತ ಕಾಲೇಜೊಂದರ ಪ್ರಾಧ್ಯಾಪಕಿಯೋರ್ವರ ಮಾನಹಾನಿಕರವಾಗಿ ಪತ್ರ ಬರೆದು ವೈರಲ್ ಮಾಡಿದ್ದಲ್ಲದೆ, ಬಗ್ಗೆ ಅಶ್ಲೀಲವಾಗಿ ಸಾರ್ವಜನಿಕ ಸ್ಥಳದಲ್ಲಿ ಭಿತ್ತಿ ಪತ್ರಗಳನ್ನು ಅಂಟಿಸಿ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಷ್ಠಿತ ಕಾಲೇಜೊಂದರ ಸಂಚಾಲಕ ಹಾಗೂ ಇಬ್ಬರು ಪ್ರಾಧ್ಯಾಪಕರನ್ನು ಮಂಗಳೂರು ನಗರ ಪೊಲೀಸರು ದಸ್ತಗಿರಿ ಮಾಡಿರುತ್ತಾರೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ನಿವಾಸಿ ಪ್ರಕಾಶ್ ಶೆಣೈ, ಪ್ರಾಯ(44), ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ, ಮೇಗಿನ ಉಳಿರೋಡಿ ನಿವಾಸಿ ಪ್ರದೀಪ್ ಪೂಜಾರಿ(36), ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕು ನಿವಾಸಿ ತಾರಾನಾಥ ಬಿ ಎಸ್ ಶೆಟ್ಟಿ(32) ಬಂಧಿತ ಆರೋಪಿಗಳು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪ್ರತಿಷ್ಠಿತ ಕಾಲೇಜೊಂದರ ಪ್ರಾದ್ಯಾಪಕರ ನೇಮಕಾತಿ ವಿಚಾರದಲ್ಲಿ ನಡೆದಿರುವ ಗಲಾಟೆಗೆ ಸಂಬಂಧಿಸಿದಂತೆ ಆರೋಪಿಗಳು ಪ್ರಾಧ್ಯಾಪಕಿಯೊಬ್ಬರ ವಿರುದ್ಧ ಮಾನಹಾನಿಕರವಾದ ಪತ್ರವನ್ನು ಬರೆದು ಅಂಚೆ ಮೂಲಕ ಸಹದ್ಯೋಗಿ ಪ್ರಾಧ್ಯಾಪಕರಿಗೆ, ಕಾಲೇಜಿನ ಮುಖ್ಯಸ್ಥರಿಗೆ, ಶಿಕ್ಷಣ ಇಲಾಖೆಯ ಉನ್ನತ ದರ್ಜೆಯ ಅಧಿಕಾರಿಗಳಿಗೆ ಕಳುಹಿಸಿ ಮಾನಹಾನಿ ಮಾಡಿದ್ದರು. ಅಲ್ಲದೆ ಆಕೆಯ ಬಗ್ಗೆ ಅಶ್ಲೀಲವಾಗಿ ಬರೆದು ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ್ ಗಳನ್ನು ಅಂಟಿಸಿದ್ದರು.
ಆರೋಪಿಗಳು ಪ್ರಾಧ್ಯಾಪಕಿಯ ವಿರುದ್ಧ ಮಾನಹಾನಿಕರವಾದ ಬರಹವನ್ನು ಪ್ರಾರಂಭದಲ್ಲಿ ಪೋಸ್ಟ್ ಕಾರ್ಡ್, ಇನ್ ಲ್ಯಾಂಡ್ ಲೆಟರ್ ನಲ್ಲಿ ಆಕೆಯ ಭಾವಚಿತ್ರದೊಂದಿಗೆ ಸಹೋದ್ಯೋಗಿ ಪ್ರಾಧ್ಯಾಪಕರಿಗೆ, ಕಾಲೇಜಿನ ಮುಖ್ಯಸ್ಥರಿಗೆ, ಶಿಕ್ಷಣ ಇಲಾಖೆಯ ಉನ್ನತ ದರ್ಜೆಯ ಅಧಿಕಾರಿಗಳಿಗೆ ಅಂಚೆ ಮೂಲಕ ಕಳುಹಿಸಿಕೊಡುತ್ತಿದ್ದರು. ಇದಲ್ಲದೆ ಮಹಿಳಾ ಪ್ರಾಧ್ಯಾಪಕಿಯ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ಐಡಿಯನ್ನು ನಮೂದಿಸಿ ಅಶ್ಲೀಲವಾಗಿ ಬರೆದು ಪೋಸ್ಟರ್ ಗಳನ್ನು ತಯಾರಿಸಿ ಸುಳ್ಯ, ಸುಬ್ರಹ್ಮಣ್ಯ, ಸಂಪಾಜೆ, ಮಡಿಕೇರಿ, ಮೈಸೂರು, ಚಿಕ್ಕಮಗಳೂರು, ಮೂಡಿಗೆರೆ, ಬಾಳೆಹೊನ್ನೂರು, ಎನ್ ಆರ್ ಪುರ, ಶಿವಮೊಗ್ಗ ಮುಂತಾದ ಬಸ್ ಸ್ಟಾಂಡ್ ಗಳ ಸಾರ್ವಜನಿಕ ಶೌಚಾಲಯಗಳಲ್ಲಿ ಅಂಟಿಸಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು ಮಹಿಳಾ ಪ್ರಾಧ್ಯಾಪಕಿಗೆ ಕರೆ ಮಾಡಿ ಅಶ್ಲೀಲವಾಗಿ ಮಾನಹಾನಿಕರವಾಗಿ ಮಾತನಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಲಾಗಿದೆ.
ಆರೋಪಿಗಳ ಪೈಕಿ ಪ್ರದೀಪ್ ಪೂಜಾರಿ ಎಂಬಾತನ ವಿರುದ್ಧ ಈ ಹಿಂದೆಯೇ 2019ನೇ ಇಸವಿಯಲ್ಲಿ ಕಾಲೇಜ್ ಪ್ರಾಧ್ಯಾಪಕಿಯೊಬ್ಬರಿಗೆ ಮಾನಹಾನಿಗೆ ಯತ್ನಿಸಿದ್ದ ಪ್ರಕರಣ ದಾಖಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಾಧ್ಯಾಪಕಿ ನೀಡಿರುವ ದೂರಿನನ್ವಯ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.