ಮಂಗಳೂರು: ಮಹಿಳೆಗೆ ಮಾರಣಾಂತಿಕ ಹಲ್ಲೆ ಆರೋಪ; 'ಆಪದ್ಬಾಂಧವ' ಆಸೀಫ್ ಸೇರಿದಂತೆ ಮೂವರು ಅರೆಸ್ಟ್
Sunday, April 3, 2022
ಮಂಗಳೂರು: ಮಹಿಳೆಯೋರ್ವರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪ ಮೇಲೆ ಸಾಮಾಜಿಕ ಕಾರ್ಯಕರ್ತ ಮೈಮುನಾ ಫೌಂಡೇಶನ್ ಆಶ್ರಮದ ಸ್ಥಾಪಕ 'ಆಪದ್ಬಾಂಧವ' ಆಸೀಫ್ ಸಹಿತ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆಪದ್ಬಾಂಧವ ಆಸೀಫ್, ಶಿವಲಿಂಗಂ, ಅಫ್ತಾಬ್ ಬಂಧಿತ ಆರೋಪಿಗಳು. ಬೀದಿಬದಿಯಲ್ಲಿ ಬಿದ್ದಿರುವ ನಿರಾಶ್ರಿತರಿಗೆ ಆಶ್ರಯ ಒದಗಿಸುವ ಕಾರ್ಯದಲ್ಲಿ ತೊಡಗಿರುವ 'ಆಪದ್ಬಾಂಧವ' ಆಸೀಫ್ ತಮ್ಮ ಸಹಚರರೊಂದಿಗೆ ಸೇರಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಕಳೆದ ಒಂದು ವರ್ಷದಿಂದ ಮೈಮುನಾ ಫೌಂಡೇಶನ್ ಆಶ್ರಮದಲ್ಲಿ ಸಂತ್ರಸ್ತ ಮಹಿಳೆ ವನಜಾ ಕೆಲಸ ನಿರ್ವಹಿಸುತ್ತಿದ್ದರು. ಈ ನಡುವೆ ಮೈಮುನಾ ಫೌಂಡೇಶನ್ ಆಶ್ರಮದ ವಾರ್ಡನ್ ಹಾಗೂ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಶಶಿಧರ್ ವಂಚನೆಗೈದು ಪರಾರಿಯಾಗಿದ್ದ ಎಂದು ಹೇಳಲಾಗಿದೆ.
ಈ ಗೋಲ್ ಮಾಲ್ ನಲ್ಲಿ ಸಂತ್ರಸ್ತ ಮಹಿಳೆ ವನಜಾ ಕೂಡಾ ಭಾಗಿಯಾಗಿದ್ದಾರೆಂದು ಆರೋಪಿಸಿರುವ 'ಆಪದ್ಬಾಂಧವ' ಆಸೀಫ್ ಈ ಬಗ್ಗೆ ತಪ್ಪೊಪ್ಪಿಕೊಳ್ಳುವಂತೆ ಬೆದರಿಕೆಯೊಡ್ಡಿದ್ದಾನೆ. ಅಲ್ಲದೆ ತನ್ನ ಸಹಚರ ಶಿವಲಿಂಗಂನೊಂದಿಗೆ ಸೇರಿ ವಿಕೆಟ್, ಬೆಲ್ಟ್, ಕುರ್ಚಿಯಲ್ಲಿ ಮಾರಣಾಂತಿಕವಾಗಿ ಹಲ್ಲೆಗೈದಿರುವುದಾಗಿ ಆರೋಪ ಮಾಡಲಾಗಿದೆ.
ಅಲ್ಲದೆ ಎರಡು ಮೊಬೈಲ್ ಫೋನ್‌ಗಳು, ಬ್ಯಾಂಕ್ ಪಾಸ್ ಪುಸ್ತಕ, ಟ್ಯಾಬ್ ಇತರ ದಾಖಲೆಗಳನ್ನು ಬಲವಂತವಾಗಿ ಕಸಿದುಕೊಂಡಿದ್ದಾರೆಂಬ ಆರೋಪವೂ ಕೇಳಿ ಬಂದಿದೆ. ಅಲ್ಲದೆ ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡ ಸಂತ್ರಸ್ತ ಮಹಿಳೆಯು ಮೇಲಿನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದಾರೆಂದು ಸುಳ್ಳು ಹೇಳಿ ಚಿಕಿತ್ಸೆ ಆಸೀಫ್ ಕೊಡಿಸಿದ್ದಾನೆ. ಆ ಬಳಿಕ ಮೈಮುನಾ ಫೌಂಡೇಶನ್ ನ ಮತ್ತೊಬ್ಬ ಪಾಲುದಾರ ಅಫ್ತಾಬ್ ವನಜಾರನ್ನು ಕೂಡಿ ಹಾಕಿದ್ದಾರೆಂದು ಆರೋಪಿಸಲಾಗಿದೆ. ಈ ಬಗ್ಗೆ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.