ಉಪ್ಪಿನಂಗಡಿ: ಅನ್ಯಕೋಮಿನ ಯುವತಿಯನ್ನು ಆಟೊರಿಕ್ಷಾದಲ್ಲಿ ಕರೆದೊಯ್ದ ಯುವಕನನ್ನು ಥಳಿಸಿದ ಇಬ್ಬರ ಬಂಧನ
Tuesday, April 5, 2022
ಮಂಗಳೂರು: ಅನ್ಯಕೋಮಿನ ಯುವತಿಯೊಂದಿಗೆ ಆಟೊದಲ್ಲಿ ಸಂಚರಿಸುತ್ತಿದ್ದ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೈದಿರುವ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದ ನಿವಾಸಿಗಳಾದ ಬಾಲಚಂದ್ರ (35), ರಂಜಿತ್ (31) ಬಂಧಿತ ಆರೋಪಿಗಳು.
ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ, ಸಂಪ್ಯ ಮನೆ ನಿವಾಸಿ ನಜೀರ್(21) ಎಂಬಾತ ತಾನು ಪ್ರೀತಿಸುತ್ತಿದ್ದ ಪೂಜಾ ಎಂಬಾಕೆಯನ್ನು ತನ್ನ ಆಟೋ ರಿಕ್ಷಾದಲ್ಲಿ ಕುಳ್ಳಿರಿಸಿಕೊಂಡು ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯ ರಸ್ತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದ. ಅಲ್ಲಿಂದ ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿಗೆ ತಲುಪುತ್ತಿರುವಾಗ ಅಲ್ಲಿಗೆ ಆರೋಪಿಗಳು ಆಟೋರಿಕ್ಷಾವನ್ನು ತಡೆದು ನಿಲ್ಲಿಸಿದ್ದಾರೆ.
ಬಳಿಕ ನಜೀರ್ ನನ್ನು ಉದ್ದೇಶಿಸಿ ರಿಕ್ಷಾದಲ್ಲಿದ್ದ ಯುವತಿಯ ಬಗ್ಗೆ ವಿಚಾರಿಸಿದ್ದಾರೆ. ಆಗ ಆಕೆಯ ಹೆಸರು ಪೂಜಾ ಎಂದು ತಿಳಿಯುತ್ತಿದ್ದಂತೆ "ಬೇವರ್ಸಿ, ನಿನಗೆ ತಿರುಗಾಡಲು ಹಿಂದೂ ಹುಡುಗಿಯೇ ಆಗಬೇಕಾ?" ಎಂದು ಕೈಯಿಂದ ಕಪಾಳಕ್ಕೆ, ತಲೆಗೆ ಕೈಯಿಂದ ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಅಲ್ಲದೆ ಅಲ್ಲಿಯೇ ಪೊದೆಯಲ್ಲಿದ್ದ ಮರದ ಕೊಂಬೆಯ ಬೆತ್ತವನ್ನು ತಂದು ಯದ್ವಾತದ್ವಾ ಥಳಿಸಿದ್ದಾರೆ. ಅಲ್ಲದೆ ಇನ್ನು ಮುಂದಕ್ಕೆ ಈಕೆಯೊಂದಿಗೆ ಸುತ್ತಾಡಿದರೆ ಕೊಲ್ಲುವುದಾಗಿ ಜೀವ ಬೆದರಿಕೆಯೊಡ್ಡಿದ್ದಾರೆ. ಅಲ್ಲದೆ ಪೂಜಾಗೂ ಬೈದಿರುವುದಾಗಿ ದೂರು ದಾಖಲಾಗಿದೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.