ಅಸಭ್ಯವಾಗಿ ವರ್ತಿಸುತ್ತಿದ್ದ ಉಪನ್ಯಾಸಕನಿಗೆ ಧರ್ಮದೇಟು ನೀಡಿ ಠಾಣೆಯ ಮೆಟ್ಟಿಲೇರಿದ ಮಹಿಳಾ ಉಪನ್ಯಾಸಕಿಯರು!
Friday, April 15, 2022
ಬೆಳಗಾವಿ: ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಬೆಳಗಾವಿ ನಗರದ ಸರ್ದಾರ ಪಿಯು ಕಾಲೇಜಿನ ಉಪನ್ಯಾಸಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮತ್ತೊಂದೆಡೆ ಕಾಲೇಜಿನ ಆವರಣದಲ್ಲಿಯೇ ಮಹಿಳಾ ಸಿಬ್ಬಂದಿ ಉಪನ್ಯಾಸಕನಿಗೆ ಧರ್ಮದೇಟು ನೀಡಿದ್ದಾರೆ.
ಪಿಯು ಕಾಲೇಜಿನ ಇಂಗ್ಲೀಷ್ ವಿಭಾಗದ ಖಾಯಂ ಉಪನ್ಯಾಸಕ ಅಮಿತ ಬಸವಮೂರ್ತಿ, ಪ್ರತಿ ನಿತ್ಯ ಕಾಲೇಜಿಗೆ ಮದ್ಯ ಸೇವನೆ ಮಾಡಿಕೊಂಡು ಬರುತ್ತಿದ್ದ. ಅಲ್ಲದೆ ಮಹಿಳಾ ಉಪನ್ಯಾಸಕಿಯರೊಂದಿಗೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ. ಅವಾಚ್ಯ ಶಬ್ದಗಳಿಂದ ನಿಂದಿಸುದಲ್ಲದೆ ದೈಹಿಕವಾಗಿ ದೌರ್ಜನ್ಯ ಎಸಗುತ್ತಿದ್ದ ಎಂದು ಆರೋಪಿಸಲಾಗಿದೆ.
ಅಲ್ಲದೆ ಮಹಿಳಾ ಸಿಬ್ಬಂದಿಯ ವಿಶ್ರಾಂತಿ ಕೊಠಡಿಗೆ ಬಂದು ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ. ಈ ಕುರಿತು ಕಾಲೇಜು ಮುಖ್ಯಸ್ಥರಿಗೆ ಮೇಲಿಂದ ಮೇಲೆ ದೂರು ಸಲ್ಲಿಸಿದರು ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಉಪನ್ಯಾಸಕನಿಗೆ ಧರ್ಮದೇಟು ನೀಡಿರುವ ಮಹಿಳಾ ಉಪನ್ಯಾಸಕಿಯರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಇದೀಗ ಉಪನ್ಯಾಸಕನ ವಿರುದ್ಧ ಪ್ರಕರಣ ದಾಖಲಾಗಿದೆ.