ಕಡಲ ತೀರದಲ್ಲಿ ನಡೆಯಿತು ಸಕ್ಕರೆ ನಾಡಿನ ಜೋಡಿಯ ವಿವಾಹ: ಸರಳ ಮದುವೆಗೆ ಅದ್ದೂರಿತನದ ಮೆರುಗು ನೀಡಿದ ಸಮುದ್ರರಾಯ!
Friday, April 8, 2022
ಕುಂದಾಪುರ: ಸಮುದ್ರಗಳ ಮೊರೆತಗಳ ನಡುವೆಯೇ ಜೋಡಿಯೊಂದು ಇದೇ ಮೊದಲ ಬಾರಿಗೆ ಕಡಲ ತೀರದಲ್ಲಿ ಸಪ್ತಪದಿ ತುಳಿದಿದೆ. ಇದಾವುದೋ ಸಿನಿಮಾ ಅಥವಾ ಸೀರಿಯಲ್ ಕಥೆ ಹೇಳುತ್ತಿದ್ದಾರೆ ಎಂದು ಅಂದುಕೊಳ್ಳಬೇಡಿ. ನಿಜ ಜೀವನದಲ್ಲಿಯೇ ಸಮುದ್ರ ತೀರದಲ್ಲಿ ಸಕ್ಕರೆ ನಾಡಿನ ಜೋಡಿಯೊಂದು ಸಪ್ತಪದಿ ತುಳಿದಿದೆ.
ಪ್ರಕೃತಿ ಮಡಿಲಲ್ಲಿ ಯಾವುದೇ ಆಡಂಬರದ ವೇದಿಕೆಯನ್ನು ಸಜ್ಜು ಮಾಡದೆ ಸರಳವಾಗಿ ಮದುವೆ ಆಗಿದ್ದರೂ ಪ್ರಕೃತಿಯ ಸೌಂದರ್ಯ ಈ ಮದುವೆಗೆ ಅದ್ದೂರಿತನ ನೀಡಿದೆ. ಇದೀಗ ಈ ಮದುವೆಯ ಫೋಟೋಗಳು ಭಾರೀ ವೈರಲ್ ಆಗಿದ್ದು, ವ್ಹಾವ್ ಎನ್ನುತ್ತಿದ್ದಾರೆ ನೆಟ್ಟಿಗರು.
ಮಂಡ್ಯದ ಲಿಂಗಾಯತ ಸಮುದಾಯದ ಯುವಕ - ಯುವತಿ ಕುಂದಾಪುರದ ಎಂ.ಕೋಡಿ ಸಮೀಪ ಬುಧವಾರ ಬೆಳಗ್ಗೆ ಕಡಲ ತೀರದ ಪ್ರಕೃತಿ ಮಡಿಲಲ್ಲಿ ಮದುವೆಯಾಗಿದ್ದಾರೆ. ಕಡಲ ತೀರದಲ್ಲೇ ವಿವಾಹ ಮಂಟಪ ನಿರ್ಮಿಸಲಾಗಿತ್ತು. ಕಟ್ಕೇರಿ ಶಿವಾನಂದ ಐತಾಳ್ ಸುಲಗ್ನೇ ಸಾವಧಾನ ಮಂತ್ರದ ಮಂಗಳ ಸೂತ್ರ ಧಾರಣೆ ಮಾಡಿಸಿದರು. ಬ್ರಾಹ್ಮಣ ಸಂಪ್ರದಾಯ ಪುರೋಹಿತರ ಉಪಸ್ಥಿತಿಯಲ್ಲಿ ಮದುವೆ ನಡೆದಿದೆ.
ವಧೂ - ವರರ ಕಡೆಯವರು, ಬಂಧು ಮಿತ್ರರು ಈ ಮದುವೆಯಲ್ಲಿ ಭಾಗವಹಿಸಿದ್ದರು. ಆನೆಗುಡ್ಡೆ ದೇವಸ್ಥಾನದ ಪ್ರಸಾದವೇ ಮದುವೆ ಭೋಜನವಾಗಿತ್ತು. ಪ್ರತಿಯೊಬ್ಬರಿಗೂ ಮದುವೆಯ ಬಗ್ಗೆ ನೂರಾರು ಕನಸು ಇರುತ್ತೆ. ಇದೇ ರೀತಿ ನಡೆಯಬೇಕು. ಇಂತಹದ್ದೇ ಕಲ್ಯಾಣ ಮಂಟಪ, ಧಿರಿಸು, ಆಭರಣ, ಭೋಜನದ ಮೆನು, ಪುಷ್ಪಾಲಂಕಾರ… ಅಬ್ಬಬ್ಬಾ ಒಂದಲ್ಲ, ಎರಡಲ್ಲ… ಆದರೆ ಪ್ರಕೃತಿ ಮಡಿಲಲ್ಲಿ ತೆರೆದ ಮಂಟಪದಲ್ಲಿಯೇ ಈ ಜೋಡಿ ಮದುವೆಯಾಗಿರೋದು ವಿಶೇಷವೆನಿಸಿದೆ.