ಮಂಗಳೂರು: ಎನ್ಐಟಿಕೆ ಬೀಚ್ ನಲ್ಲಿ ಸೋದರಿಯರಿಬ್ಬರು ಸಮುದ್ರ ಪಾಲು
Sunday, April 10, 2022
ಮಂಗಳೂರು: ಮೃತಪಟ್ಟ ಕುಟುಂಬದ ಹಿರಿಯರೊಬ್ಬರ ಪಿಂಡ ಪ್ರದಾನ ಮಾಡಲೆಂದು ಕುಟುಂಬದೊಂದಿಗೆ ಎನ್ಐಟಿಕೆ ಬೀಚ್ ಗೆ ಬಂದಿದ್ದ ಸೋದರಿಯರಿಬ್ಬರು ಸಮುದ್ರ ಪಾಲಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಮಂಗಳೂರು ಶಕ್ತಿನಗರ ಮೂಲದ ತೃಷಾ(17), ವೈಷ್ಣವಿ(21) ಸಮುದ್ರಪಾಲಾದ ಸೋದರಿಯರು.
ಸಮುದ್ರಪಾಲಾಗಿರುವವರು ಸೋದರ ಸಂಬಂಧದಲ್ಲಿ ಸಹೋದರಿಯರಾಗಿದ್ದಾರೆ. ಇತ್ತೀಚೆಗೆ ಮೃತಪಟ್ಟ ತಮ್ಮ ಕುಟುಂಬದ ಹಿರಿಯರ ತಿಥಿ ಕಾರ್ಯದ ನಿಮಿತ್ತ ಪಿಂಡ ಪ್ರದಾನ ಮಾಡಲೆಂದು ಕುಟುಂಬದವರೊಂದಿಗೆ ಇವರು ಎನ್ಐಟಿಕೆ ಬಳಿಯಿರುವ ಸಮುದ್ರ ತೀರಕ್ಕೆ ಬಂದಿದ್ದರು. ಈ ವೇಳೆ ವೆಂಕಟೇಶ್ ಎಂಬವರು ವೈಷ್ಣವಿ ಹಾಗೂ ತ್ರಿಷಾರೊಂದಿಗೆ ಆಟವಾಡಲೆಂದು ನೀರಿಗಿಳಿದಿದ್ದಾರೆ. ಈ ಸಂದರ್ಭ ಅಲೆಗಳ ಹೊಡೆತಕ್ಕೆ ಸಿಲುಕಿರುವ ಮೂವರು ಕೊಚ್ಚಿ ಹೋಗಿದ್ದಾರೆ.
ತಕ್ಷಣವೇ ಅಲ್ಲಿದ್ದ ಸ್ಥಳೀಯ ಈಜುಗಾರರು ಹಾಗೂ ಸುರತ್ಕಲ್ ಪೊಲೀಸ್ ಠಾಣೆಯ ಹೋಮ್ ಗಾರ್ಡ್ ಪ್ರಶಾಂತ್ ಕಾರ್ಯಾಚರಣೆ ನಡೆಸಿ ಮೂವರನ್ನು ಸಮುದ್ರದಿಂದ ಮೇಲಕ್ಕೆತ್ತಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ವೈಷ್ಣವಿ ಹಾಗೂ ತ್ರಿಷಾ ಮೃತಪಟ್ಟಿದ್ದಾರೆ. ವೆಂಕಟೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.