ಸಮುದಾಯ ಆರೋಗ್ಯ ಕೇಂದ್ರವೊಂದರಲ್ಲಿ ವೈದ್ಯರಿಲ್ಲದೆ ಚಿಕಿತ್ಸೆ ಲಭ್ಯವಾಗದೆ ಬಾಲಕ ಮೃತ್ಯು: ಆಸ್ಪತ್ರೆ ಮುಂಭಾಗ ಬೆಂಕಿ ಹಚ್ಚಿ ಆಕ್ರೋಶ
Saturday, April 30, 2022
ಕಲಬುರಗಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವೊಂದರಲ್ಲಿ ವೈದ್ಯರಿರದ ಹಿನ್ನೆಲೆಯಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರಕದೆ ಬಾಲಕನೋರ್ವನು ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ನಡೆದಿದೆ. ಪರಿಣಾಮ ಸಿಟ್ಟಿಗೆದ್ದ ಸಾರ್ವಜನಿಕರು ಆಸ್ಪತ್ರೆಯ ಮುಂಭಾಗವೇ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆಲೋಗಿ ನಿವಾಸಿ ಗುರು ಮಂಗಾ (10) ಮೃತಪಟ್ಟ ದುರ್ದೈವಿ ಬಾಲಕ.
ಗುರು ಟ್ರ್ಯಾಕ್ಟರ್ ಮೇಲಿನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆತನನ್ನು ನೆಲೋಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇರದ್ದರಿಂದ ತಕ್ಷಣಕ್ಕೆ ಚಿಕಿತ್ಸೆ ದೊರಕಿರಲಿಲ್ಲ. ಬಳಿಕ ಆತನನ್ನು ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗಮಧ್ಯೆ ಬಾಲಕ ಮೃತಪಟ್ಟಿದ್ದಾನೆ.
ಪರಿಣಾಮ ಸಿಟ್ಟಿಗೆದ್ದ ಸಾರ್ವಜನಿಕರು ಆಸ್ಪತ್ರೆಗೆ ಮುಳ್ಳು ಇಟ್ಟು, ಟಯರ್ ಇಟ್ಟು ಬೆಂಕಿ ಹಚ್ಚಿದ್ದಲ್ಲದೆ, ಆಸ್ಪತ್ರೆ ಬಳಿ ನಿಲ್ಲಿಸಿದ್ದ ಆ್ಯಂಬುಲೆನ್ಸ್ಗೆ ಕಲ್ಲೆಸೆದು ಹಾನಿ ಮಾಡಿದ್ದಾರೆ. ನೆಲೋಗಿ ಗ್ರಾಮ ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಅವರ ತವರೂರಾಗಿದ್ದು, ಅಲ್ಲಿಯೇ ಈ ರೀತಿಯ ಅವ್ಯವಸ್ಥೆ ಉಂಟಾಗಿದೆ. ಆದ್ದರಿಂದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.