ಮಂಗಳೂರು: ಶಾಲಾ ವಿದ್ಯಾರ್ಥಿನಿಗೆ ಮೊಬೈಲ್ ನಂಬರ್ ಬರೆದು ನೀಡಿದ್ದ ಖಾಸಗಿ ಸಿಟಿ ಬಸ್ ನಿರ್ವಾಹಕ ಪೊಲೀಸ್ ವಶಕ್ಕೆ
Sunday, April 24, 2022
ಮಂಗಳೂರು: 8ನೇ ತರಗತಿಯ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಗೆ ಬಸ್ ಟಿಕೆಟ್ ನಲ್ಲಿ ಮೊಬೈಲ್ ನಂಬರ್ ಬರೆದು ನೀಡಿದ್ದ ಖಾಸಗಿ ಸಿಟಿ ಬಸ್ ನಿರ್ವಾಹಕನನ್ನು ಮಂಗಳೂರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆ ಮೂಲದ ಮಂಜುನಾಥ(21) ವಶಪಡಿಸಿಕೊಂಡಿರುವ ಆರೋಪಿ. ಮಂಜುನಾಥ ಮಂಗಳೂರಿನ ಸ್ಟೇಟ್ ಬ್ಯಾಂಕ್ ನಿಂದ ಬೋಂದೆಲ್ ನಡುವೆ ಸಂಚರಿಸುವ ರೂಟ್ ಸಂಖ್ಯೆ 19ರ ಖಾಸಗಿ ಸಿಟಿ ಬಸ್ ನಲ್ಲಿ ನಿರ್ವಾಹಕನಾಗಿ ದುಡಿಯುತ್ತಿದ್ದ.
ಈತ ಬಸ್ ನಲ್ಲಿ ಬರುತ್ತಿದ್ದ 8ನೇ ತರಗತಿಯ ವಿದ್ಯಾರ್ಥಿನಿಗೆ ಟಿಕೆಟ್ ನಲ್ಲಿ ಬರೆದು ತನ್ನ ಫೋನ್ ನಂಬರ್ ಅನ್ನು ನೀಡಿದ್ದ. ಈ ವಿಚಾರ ಬಾಲಕಿಯ ತಾಯಿಗೆ ಗೊತ್ತಾಗಿದೆ. ಆಕೆ ತಕ್ಷಣ ಸಾರ್ವಜನಿಕ ಸ್ಥಳದಲ್ಲಿಯೇ ಬಸ್ ನಿರ್ವಾಹಕ ಮಂಜುನಾಥನನ್ನು ತರಾಟೆಗೆ ತೆಗೆದುಕೊಂಡು ಧರ್ಮದೇಟು ನೀಡಿದ್ದಾರೆ. ಆತನನ್ನು ಹಿಗ್ಗಾಮುಗ್ಗ ಥಳಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ಬಳಿಕ ಬಾಲಕಿಯ ತಾಯಿ ಬಸ್ ನಿರ್ವಾಹಕ ಮಂಜುನಾಥನ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.