ಕ್ಯಾಬ್ ಚಾಲಕರೊಂದಿಗಿನ ತಮ್ಮ ವಿಚಿತ್ರ ಅನುಭವವನ್ನು ಬಿಚ್ಚಿಟ್ಟ ನಟಿ ಶ್ರದ್ಧಾ ಶ್ರೀನಾಥ್
Saturday, April 2, 2022
ಹೈದರಾಬಾದ್: ಕನ್ನಡತಿ ನಟಿ ಶ್ರದ್ಧಾ ಶ್ರೀನಾಥ್ ಸ್ಯಾಂಡಲ್ವುಡ್ಗಿಂತ ಪರಭಾಷೆಯಲ್ಲಿಯೇ ಮಿಂಚುತ್ತಿದ್ದಾರೆ. ಇತ್ತೀಚೆಗಷ್ಟೇ ತೆಲುಗು ಚಿತ್ರವೊಂದರಲ್ಲಿ ಅಭಿನಯಿಸಿರುವ ಅವರು ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮುಗಿಸಿದ್ದಾರೆ.
ಇದೀಗ ಶ್ರದ್ಧಾ ಶ್ರೀನಾಥ್ ಕ್ಯಾಬ್ ಚಾಲಕರೊಂದಿಗಿನ ತಮ್ಮ ವಿಚಿತ್ರ ಅನುಭವಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 'ಇತ್ತೀಚೆಗೆ ಕ್ಯಾಬ್ ಚಾಲಕನೊಬ್ಬ ತನ್ನನ್ನು ಗುರುತಿಸಿ 'ಮೇಡಂ ಪ್ಲೀಸ್' ಎಂಬ ಅಪರೂಪದ ವಿನಂತಿಯನ್ನು ಮಾಡಿದ್ದಾನೆಂದು ಶ್ರದ್ಧಾ ಬಹಿರಂಗಪಡಿಸಿದ್ದಾರೆ. ಈತ ಇನ್ಸ್ಟಾಗ್ರಾಂನಲ್ಲಿ ತನ್ನನ್ನು ಫಾಲೋ ಮಾಡುವಂತೆ ಒತ್ತಾಯಿಸಿದ್ದನಂತೆ. ಆದರೆ ತಾನು ನಿರಾಕರಿಸಿದಾಗಲೂ ಚಾಲಕ ಅದರ ಬಗ್ಗೆ ಕೂಲ್ ಆಗಿ ವರ್ಣಿಸಿದ್ದಾನೆ. ಬಹುಶಃ ಕ್ಯಾಬ್ ಚಾಲಕ ಪ್ರಸಿದ್ಧ ವ್ಯಕ್ತಿಯಿಂದ ಅನುಸರಿಸಲ್ಪಡುವ ಫ್ಯಾಂಟಸಿ ಹೊಂದಿರಬಹುದು ಎಂದು ಶ್ರದ್ಧಾ ಹೇಳಿಕೊಂಡಿದ್ದಾರೆ.
ಮತ್ತೊಬ್ಬ ಕ್ಯಾಬ್ ಚಾಲಕ ತಾನು ವಿನಂತಿ ಮಾಡಿದರೂ ಪ್ರಯಾಣದ ಸಂದರ್ಭದಲ್ಲಿ ಎಸಿ ಆನ್ ಮಾಡಲು ನಿರಾಕರಿಸಿದ್ದಾನೆ. ತೈಲ ಬೆಲೆ ಹೆಚ್ಚಿರುವ ಕಾರಣ ಕ್ಯಾಬ್ ಡ್ರೈವರ್ ಎಸಿ ಆನ್ ಮಾಡಲು ನಿರಾಕರಿಸಿದ್ದಾರೆ ಎನ್ನುವ ಮೂಲಕ ಏರುತ್ತಿರುವ ಇಂಧನ ದರದ ಸಮಸ್ಯೆಯ ಬಗ್ಗೆ ಶ್ರದ್ಧಾ ಶ್ರೀನಾಥ್ ದನಿ ಎತ್ತಿದ್ದಾರೆ. ಅಲ್ಲದೆ ಓಲಾ ಕಂಪನಿಯು ಕ್ಯಾಬ್ ಚಾಲಕರ ಅರ್ಹ ಆದಾಯವನ್ನು ದೋಚುತ್ತಿದೆ ಎಂದು ಶ್ರದ್ಧಾ ಗಂಭೀರ ಆರೋಪಿಸಿದರು. ನಾನು ಸ್ವಲ್ಪ ಹಣವನ್ನು ಉಳಿಸಲು ಪ್ರಯತ್ನಿಸಿದ್ದಕ್ಕಾಗಿ ಕ್ಯಾಬ್ ಡ್ರೈವರ್ ಅನ್ನು ದೂಷಿಸುವುದಿಲ್ಲ ಎಂದು ನಟಿ ಶ್ರದ್ಧಾ ಶ್ರೀನಾಥ್ ಬರೆದುಕೊಂಡಿದ್ದಾರೆ.