ಚಾಯ್ ವಾಲಿಯಾದ ಅರ್ಥಶಾಸ್ತ್ರ ಪದವೀಧರೆ: ಈಕೆಯ ಕಥೆಯೇನು ಗೊತ್ತೇ?
Wednesday, April 20, 2022
ಪಟನಾ: ಚಹಾ ಎಲ್ಲರ ಅತ್ಯಂತ ಇಷ್ಟದ ಪೇಯ. ಸ್ವತಃ ಭಾರತದ ಪ್ರಧಾನಿಯವರೇ ಚಹಾ ಮಾರಾಟ ಮಾಡಿದ್ದೇನೆಂದು ಹೇಳಿದ್ದಾರೆ. ಪ್ರತಿಯೊಬ್ಬ ಚಹಾ ಪ್ರೇಮಿಗೂ ಓರ್ವ ಫೇವರಿಟ್ ಚಾಯ್ವಾಲಾ ಇದ್ದೇ ಇರುತ್ತಾರೆ. ಇದೀಗ ಈ ಸಾಲಿಗೆ ಮತ್ತೊಬ್ಬರು ಸೇರ್ಪಡೆಗೊಂಡಿದ್ದಾರೆ. ಆದರೆ, ಇವರು ಚಾಯ್ವಾಲಾ ಅಲ್ಲ ಚಾಯ್ವಾಲಿ.
ಈ ಖ್ಯಾತ ಚಾಯ್ವಾಲಿಯ ಹೆಸರು ಪ್ರಿಯಾಂಕಾ ಗುಪ್ತಾ ಬಿಹಾರ ಮೂಲದವರಾಗಿದ್ದು, ಅರ್ಥಶಾಸ್ತ್ರದಲ್ಲಿ ಪದವೀಧರೆಯಾಗಿದ್ದಾರೆ. ಎರಡು ವರ್ಷಗಳ ಕಾಲ ನೌಕರಿಗಾಗಿ ಅಲೆದಾಡಿ ಕಡೆಗೆ ಯಾವುದೇ ಕೆಲಸ ದೊರಕದಿದ್ದಾಗ ಬಿಹಾರ ರಾಜಧಾನಿ ಪಟನಾದಲ್ಲಿರುವ ಮಹಿಳಾ ಕಾಲೇಜಿನ ಬಳಿ ಟೀ ಸ್ಟಾಲ್ ಹಾಕಿಕೊಂಡಿದ್ದಾರೆ.
2019ರಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಪದವಿ ಮುಗಿಸಿರುವ ಪ್ರಿಯಾಂಕಾ ಗುಪ್ತಾ ಮಧ್ಯಪ್ರದೇಶದ ಖ್ಯಾತ ಚಾಯ್ವಾಲಾ ಹಾಗೂ ಎಂಬಿಎ ಪದವೀಧರ ಪ್ರಫುಲ್ ಬಿಲ್ಲೋರ್ ಅವರಿಂದ ಸ್ಪೂರ್ತಿಗೊಂಡಿದ್ದಾರಂತೆ. ಈ ಬಗ್ಗೆ ತಮ್ಮ ಜೀವನ ಕತೆಯನ್ನು ಹಂಚಿಕೊಂಡರುವ ಪ್ರಿಯಾಂಕಾ, "ಅನೇಕ ಚಾಯ್ವಾಲಾಗಳು ಇರುವಾಗ ತಾನು, ಚಾಯ್ವಾಲಿ ಯಾಕಾಗಬಾರದು? ನಾನು ನನ್ನ ಪದವಿ ಶಿಕ್ಷಣವನ್ನು 2019ರಲ್ಲಿ ಮುಗಿಸಿದೆ. ಆದರೆ, ಕಳೆದ ಎರಡು ವರ್ಷಗಳಿಂದ ಯಾವುದೇ ಉದ್ಯೋಗ ದೊರಕಲಿಲ್ಲ. ಆದ್ದರಿಂದ ಪ್ರಫುಲ್ಲ್ ಬಿಲ್ಲೋರ್ ಅವರನ್ನು ಸ್ಫೂರ್ತಿಯಾಗಿರಿಸಿಕೊಂಡು ಚಾಯ್ ವಾಲಿ ಆದೆ ಎಂದು ಹೇಳಿದ್ದಾರೆ.
24ರ ಹರೆಯದ ಪ್ರಿಯಾಂಕಾ ಕುಲ್ಹದ್ ಚಾಯ್ನಿಂದ ಪಾನ್ ಚಾಯ್ದವರೆಗೂ ವಿವಿಧ ರೀತಿಯ ಚಹಾವನ್ನು ಮಾರಾಟ ಮಾಡುತ್ತಾರೆ. ಅವರ ಒಂದು ಕಪ್ ಚಹಾಕ್ಕೆ 15 ರಿಂದ 20 ರೂ. ದರವಿರುತ್ತದೆ.
ಇನ್ನೂ ಪ್ರಫುಲ್ ಬಿಲ್ಲೋರ್ ಬಗ್ಗೆ ಹೇಳುವುದಾದರೆ, ಮಧ್ಯಪ್ರದೇಶದ ಪ್ರಫುಲ್ ಸದ್ಯ ಗುಜರಾತ್ನ ಅಹಮದಾಬಾದ್ನಲ್ಲಿ ಇದ್ದಾರೆ. ಇವರು ದೇಶಾದ್ಯಂತ ಎಂಬಿಎ ಚಾಯ್ವಾಲಾ ಎಂದೇ ಪ್ರಖ್ಯಾತಿ ಆಗಿದ್ದಾರೆ. ಬರೋಬ್ಬರಿ 3 ಕೋಟಿ ರೂ. ವಹಿವಾಟು ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಸಿಎಟಿ ಅಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗದಿದ್ದಾಗ ಅಧ್ಯಯನವನ್ನು ಅರ್ಧಕ್ಕೆ ಬಿಡಲು ನಿರ್ಧರಿಸುತ್ತಾರೆ.
ಬಳಿಕ ಪ್ರಫುಲ್ ಬೀದಿ ಬದಿಯಲ್ಲಿ ಟೀ ಮಾರಾಟ ಮಾಡಲು ಆರಂಭಿಸುತ್ತಾರೆ. ಇದಕ್ಕೂ ಮುನ್ನ ಅಹಮದಾಬಾದ್ನ ರೆಸ್ಟೋರೆಂಟ್ ಒಂದರಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿರುತ್ತಾರೆ. ಇದೇ ವೇಳೆ ಟೀ ಮಾಡುವುದನ್ನು ಚೆನ್ನಾಗಿ ಕಲಿಯುವ ಪ್ರಫುಲ್ ಕೊನೆಗೆ ತನ್ನದೇ ಸ್ವಂತ ಟೀ ಶಾಪ್ ಆರಂಭಿಸುತ್ತಾರೆ. ಆರಂಭದಲ್ಲಿ ವ್ಯಾಪಾರವಿಲ್ಲದೇ ಸಮಸ್ಯೆ ಎದುರಾದರೂ ನಂತರದ ದಿನಗಳಲ್ಲಿ ವ್ಯವಹಾರ ಚೆನ್ನಾಗಿಯೇ ನಡೆಯಲು ಆರಂಭಿಸುತ್ತದೆ.