ಕೆರೆಯಲ್ಲಿ ಮುಳುಗುತ್ತಿದ್ದ ಪತ್ನಿಯನ್ನು ರಕ್ಷಿಸಲು ಹೋಗಿ ಪತಿಯೂ ನೀರು ಪಾಲು
Saturday, April 2, 2022
ರಾಮನಗರ: ಕೆರೆಯಲ್ಲಿ ಮುಳುಗುತ್ತಿದ್ದ ಪತ್ನಿಯ ಜೀವ ಉಳಿಸಲು ಹೋಗಿ ಪತಿಯೂ ನೀರುಪಾಲಾದ ದುರಂತವೊಂದು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಕೂಡ್ಲೂರು ಗ್ರಾಮದ ವೆಂಕಟೇಶ್ (48) ಹಾಗೂ ಪಾರ್ವತಮ್ಮ (42) ಕೆರೆಯಲ್ಲಿ ಮುಳುಗಿ ಮೃತಪಟ್ಟ ದಂಪತಿ.
ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಗ್ರಾಮದ ಕೆರೆಯೊಂದರಲ್ಲಿ ಇವರಿಬ್ಬರೂ ಮುಳುಗಿ ನೀರುಪಾಲಾಗಿ ಮೃತಪಟ್ಟಿದ್ದಾರೆ. ವೆಂಕಟೇಶ್ ಹಾಗೂ ಪಾರ್ವತಮ್ಮ ದಂಪತಿ ಕುರಿಗಳ ಮೈ ತೊಳೆಯಲೆಂದು ಕೆರೆ ಬಳಿಗೆ ಕರೆದೊಯ್ದಿದ್ದರು. ಈ ಸಂದರ್ಭ ಪತ್ನಿ ಜಾರಿ ನೀರಲ್ಲಿ ಮುಳುಗಲಾರಂಭಿಸಿದ್ದಾರೆ. ಈ ಸಂದರ್ಭ ಆಕೆಯನ್ನು ರಕ್ಷಿಸಲೆಂದು ಪತಿಯೂ ನೀರಿಗೆ ಧುಮುಕಿದ್ದಾರೆ. ಆದರೆ ಇಬ್ಬರೂ ಕೆರೆಯಿಂದ ಮೇಲೆ ಬರಲಾಗದೆ ಮುಳುಗಿ ಮೃತಪಟ್ಟಿದ್ದಾರೆ. ಇಬ್ಬರ ಮೃತದೇಹವನ್ನು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.