ಯುಗಾದಿಯಂದೇ ಸಾವಿನ ಸೂತಕ: ನವವಿವಾಹಿತೆಯ ವಿಷ ಉಣಿಸಿ ಕೊಲೆ ಮಾಡಿದರೆ?
Sunday, April 3, 2022
ಚಿಕ್ಕಮಗಳೂರು: ಎಲ್ಲೆಲ್ಲೂ ಯುಗಾದಿಯ ಸಂಭ್ರಮವಿದ್ದರೆ ಇಲ್ಲೊಂದು ಮನೆಯಲ್ಲಿ ಹಬ್ಬದ ದಿನದಂದೇ ಸಾವಿನ ಸೂತಕ ಆವರಿಸಿದೆ. ನವವಿವಾಹಿತೆಯೋರ್ವಳು ಯುಗಾದಿ ದಿನದಂದೇ ಮೃತಪಟ್ಟಿದ್ದಾಳೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾರಬೈಲು ಗ್ರಾಮದ ಗಾನವಿ (27) ಮೃತಪಟ್ಟ ಯುವತಿ.
ಎನ್.ಆರ್.ಪುರ ತಾಲೂಕಿನ ಬನ್ನೂರು ಗ್ರಾಮದ ಗಾನವಿ ಕಳೆದ ವರ್ಷವಷ್ಟೇ ನಂದಿತ್ ಎಂಬಾತನನ್ನು ಮದುವೆಯಾಗಿದ್ದರು. ಇದೀಗ ಪತಿಯ ಮನೆಯಲ್ಲಿ ಗಾನವಿ ವಿಷ ಸೇವನೆಯಿಂದ ಮೃತಪಟ್ಟಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ನಂದಿತ್, ಅತ್ತೆ ಸಾವಿತ್ರಮ್ಮ, ಮಾವ ಚಂದ್ರೇಗೌಡ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಆರೋಪ ಹೊರಿಸಲಾಗಿದೆ.
ಗಾನವಿಗೆ ಪತಿ ಹಾಗೂ ಆತನ ಮನೆಯವರೆಲ್ಲಾ ಸೇರಿ ವಿಷ ಉಣಿಸಿ ಕೊಲೆ ಮಾಡಿದ್ದಾರೆ ಎಂದು ಆಕೆಯ ಮನೆಯವರು ಆರೋಪಿಸಿದ್ದಾರೆ. ಗಾನವಿಯ ತಂದೆ ಲೋಕಪ್ಪ ಗೌಡ ಇತ್ತೀಚೆಗಷ್ಟೇ ಅಳಿಯನ ಕಡೆಯವರಿಗೆ 2 ಲಕ್ಷ ರೂ. ಕೊಟ್ಟಿದ್ದರು ಎನ್ನಲಾಗಿದೆ. ಅದರ ಬಳಿಕವೂ ಗಾನವಿ ಮೇಲೆ ಹಲ್ಲೆ ನಡೆದಿತ್ತು. ಅದನ್ನು ಆಕೆ ರೆಕಾರ್ಡ್ ಮಾಡಿಟ್ಟುಕೊಂಡಿದ್ದು, ಈಗ ವಿಷ ಉಣಿಸಿ ಕೊಲೆ ಮಾಡಿದ್ದಾರೆ ಎಂದು ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.