ವಿಶ್ವದ ಅತ್ಯಂತ ಹಿರಿಯರೆಂದು ಗಿನ್ನೆಸ್ ದಾಖಲೆ ಬರೆದ ಮಹಿಳೆ ಮೃತ್ಯು!
Tuesday, April 26, 2022
ಟೋಕಿಯೊ: ಪ್ರಪಂಚದ ಅತ್ಯಂತ ಹಿರಿಯ ಮಹಿಳೆ ಎಂಬ ಗಿನ್ನೆಸ್ ದಾಖಲೆಗೆ ಸೇರ್ಪಡೆಗೊಂಡಿದ್ದ ಜಪಾನ್‌ನ 119 ವರ್ಷದ ಮಹಿಳೆ ಮೃತಪಟ್ಟಿರುವುದಾಗಿ ಜಪಾನ್ ಅಧಿಕಾರಿಗಳು ಹೇಳಿದ್ದಾರೆ.
ಜಪಾನ್ ನೈಋತ್ಯ ಪ್ರಾಂತ ಫುಕುವೊಕಾದಲ್ಲಿ 1903ರ ಜ. 2ರಂದು ಜನಿಸಿದ್ದ ಕೇನ್ ತನಾಕ ಇತ್ತೀಚಿನ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೂ ತಮ್ಮ ನಿತ್ಯದ ಕಾರ್ಯವನ್ನು ನಿರ್ವಹಿಸುತ್ತಿದ್ದ ಈಕೆ ಅತ್ಯಂತ ಲವಲವಿಕೆಯಿಂದ ಇದ್ದರು. ಬೋರ್ಡ್ ಗೇಮ್ (ಬೋರ್ಡ್ ನಲ್ಲಿ ಆಡುವ ಚೆಸ್, ಲುಡೊ ಇತ್ಯಾದಿ ಆಟಗಳಲ್ಲಿ) ಆಸಕ್ತಿ ಹೊಂದಿದ್ದ ತನಾಕರಿಗೆ ಗಣಿತದ ಸಮಸ್ಯೆಗಳನ್ನು ಬಿಡಿಸುವುದೆಂದರೆ ಅತ್ಯಂತ ಇಷ್ಟದ ಹವ್ಯಾಸವಾಗಿತ್ತು.
1922ರಲ್ಲಿ ಹಿಡಿಯೊ ತನಾಕ ಎಂಬವರನ್ನು ವಿವಾಹವಾಗಿದ್ದ ಈಕೆಗೆ 4 ಮಕ್ಕಳಿದ್ದಾರೆ. ಜೊತೆಗೆ ಮತ್ತೊಂದು ಮಗುವನ್ನು ಅವರು ದತ್ತು ಪಡೆದಿದ್ದರು. 2021ರ ಟೋಕಿಯೊ ಒಲಿಂಪಿಕ್ಸ್ ಕೂಟದ ಜ್ಯೋತಿ ಓಟದಲ್ಲಿ ಗಾಲಿಕುರ್ಚಿಯಲ್ಲಿ ಕುಳಿತು ಭಾಗವಹಿಸಲು ಕೇನ್ ತನಾಕ ಸಿದ್ಧತೆ ನಡೆಸಿದ್ದರು. ಆದರೆ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಅವರಿಗೆ ಅವಕಾಶ ದೊರಕಲಿಲ್ಲ. 2019ರ ಸಂದರ್ಭ ವಿಶ್ವದಲ್ಲಿ ಬದುಕಿರುವವರಲ್ಲಿ ಅತ್ಯಂತ ಹಿರಿಯರು ಎಂಬ ಗಿನ್ನೆಸ್ ದಾಖಲೆಗೆ ಪಾತ್ರವಾಗಿದ್ದರು.
ಇದುವರೆಗೆ ಪ್ರಪಂಚದಲ್ಲಿ ಅತೀ ಹೆಚ್ಚು ವರ್ಷ ಜೀವಿಸಿರುವ ದಾಖಲೆ ಫ್ರಾನ್ಸ್‌ನ ಜೀನ್ ಲೂಯಿಸ್ ಕಾಲ್ಮೆಂಟ್ ಹೆಸರಲ್ಲಿದೆ. 1997ರಲ್ಲಿ ಮೃತಪಟ್ಟಾಗ ಅವರಿಗೆ 122 ವರ್ಷ, 164 ದಿನ ಆಗಿತ್ತು ಎಂದು ಗಿನ್ನೆಸ್ ದಾಖಲೆ ಉಲ್ಲೇಖಿಸಿದೆ.