ಯಂತ್ರಕ್ಕೆ ವೇಲ್ ಸಿಲುಕಿ ಯುವತಿ ಬಲಿ: ಫ್ಯಾಕ್ಟರಿ ಮಾಲಕನ ವಿರುದ್ಧ ಪ್ರಕರಣ ದಾಖಲು
Monday, April 4, 2022
ಬೆಂಗಳೂರು: ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ವೇಲ್ ಯಂತ್ರಕ್ಕೆ ಸಿಲುಕಿ ಯುವತಿ ಮೃತಪಟ್ಟ ಘಟನೆ ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ನಡೆದಿದೆ.
ಶಾಜಿಯಾ (28) ಎಂಬಾಕೆ ಮೃತಪಟ್ಟ ಯುವತಿ.
ನಾಯಂಡಹಳ್ಳಿಯ ಜೆಡ್ ಎಸ್ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ನಿನ್ನೆ ಸಂಜೆ 5.15ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಶಾಜಿಯಾ ಯಂತ್ರವನ್ನು ಸ್ವಿಚ್ ಆಫ್ ಮಾಡಲು ಹೋಗಿದ್ದಾರೆ. ಅದರ ಬೆಲ್ಟ್‌ಗೆ ಅವರು ಧರಿಸಿದ್ದ ವೇಲ್ ಸಿಲುಕಿದೆ. ಪರಿಣಾಮ ಆಕೆ ಸಮತೋಲನ ತಪ್ಪಿ ಯಂತ್ರದ ಮೇಲೆಯೇ ಬಿದ್ದಿದ್ದಾರೆ.
ಪರಿಣಾಮ ಶಾಜಿಯಾ ತಲೆಗೆ ತೀವ್ರವಾಗಿ ಪೆಟ್ಟಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಆಕೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಗೆ ಫ್ಯಾಕ್ಟರಿ ಮಾಲಕರ ನಿರ್ಲಕ್ಷ್ಯ ಹಾಗೂ ಮುಂಜಾಗ್ರತಾ ಪರಿಕ್ರಮಗಳನ್ನು ನೀಡದಿರುವುದೇ ಕಾರಣ ಎನ್ನಲಾಗಿದೆ. ಮಾಲೀಕ ಜೀಶಾನ್ ವಿರುದ್ಧ ಚಂದ್ರ ಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.