ಕೆಟಿಎಂ ಬೈಕ್ ಅನ್ನೇ ಇಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಿದ ಐಟಿಐ ವಿದ್ಯಾರ್ಥಿ!
Thursday, April 28, 2022
ಉತ್ತರಪ್ರದೇಶ: ಇಲ್ಲಿನ ಆಝಂಗಢದ ಐಟಿಐ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಅಸದ್ ಅಬ್ದುಲ್ಲಾ ಎಂಬಾತ ತನ್ನ ಕೆಟಿಎಂ ಬೈಕನ್ನು ಅದೇ ಕ್ಷಮತೆ ಉಳಿಸಿಕೊಂಡು ಇಲೆಕ್ಟ್ರಿಕ್ ಬೈಕಾಗಿ ಪರಿವರ್ತಿಸಿ ಎಲ್ಲರ ಗಮನ ಸೆಳೆದಿದ್ದಾನೆ. ಈತನ ಬೈಕ್ ಈಗ ಒಂದು ಚಾರ್ಜ್ ನಲ್ಲಿ 130 ಕಿ.ಮೀ. ಓಡುವುದಲ್ಲದೆ, ಗಂಟೆಗೆ 140 ಕಿ.ಮೀ. ವೇಗದಲ್ಲೂ ಓಡುತ್ತದೆ. ದೊಡ್ಡ ಕಂಪೆನಿಗಳ ದ್ವಿಚಕ್ರ ವಾಹನಗಳಲ್ಲೂ ಈ ಕ್ಷಮತೆ ಇಲ್ಲ ಎಂದು ಅಸದ್ ಅಬ್ದುಲ್ಲಾ ಹೆಮ್ಮೆಯಿಂದ ಹೇಳುತ್ತಾನೆ.
2 ವರ್ಷಗಳ ಹಿಂದೆ ಅಸದ್ ಅಬ್ದುಲ್ಲಾ ಮಾಮೂಲಿ ಸೈಕಲಿಗೆ ಇಲೆಕ್ಟ್ರಿಕ್ ಇಂಜಿನ್ ಅಳವಡಿಸಿ ಭಾರೀ ಸುದ್ದಿಯಾಗಿದ್ದರು. ಅದನ್ನು ವಿದ್ಯುತ್ ಮೋಟಾರಲ್ಲೂ ಓಡಿಸಬಹುದಿತ್ತು. ಅಥವಾ ಹೆಚ್ಚಿನ ಆಯಾಸವಿಲ್ಲದೆ ಸುಲಭದಲ್ಲಿ ಪೆಡಲ್ ತುಳಿದೂ ಓಡಿಸಬಹುದಿತ್ತು. ಈಗ ತನ್ನ ಕೆಟಿಎಂ 200 ಸಿಸಿ ಬೈಕ್ ಅನ್ನೇ ಪ್ರಯೋಗಕ್ಕೆ ಒಳಪಡಿಸಿರುವ ಅಸದ್ ಅಬ್ದುಲ್ಲಾ, ಅದರ ಇಂಜಿನ್ ತೆಗೆದು 4000 ವ್ಯಾಟ್ ಮೋಟಾರ್ ಅಳವಡಿಸಿದ್ದಾರೆ. ಅದು 25 ಕೆ.ವಿ. ಶಕ್ತಿ ಬಿಡುಗಡೆ ಮಾಡುತ್ತದೆ. ಬಳಿಕ ಭಾರತದ ದೊಡ್ಡ ಕಂಪೆನಿಗಳು ಬಳಸುವ ಚೀನಾದ ಕ್ಯೂಎಸ್ ಕಂಪೆನಿಯ ಮೋಟಾರ್ ರೆಗ್ಯೂಲೇಟರ್ ಅದಕ್ಕೆ ಅಳವಡಿಸಿದ್ದಾರೆ. ತಾನು ಅದರಲ್ಲಿ ಸ್ವಲ್ಪ ಇಲೆಕ್ಟ್ರಾನಿಕ್ ಬದಲಾವಣೆ ಮಾಡಿದ್ದೇನೆ ಎಂದು ಹೇಳುವ ಆತ ಈ ಗುಟ್ಟು ಟ್ರೇಡ್ ಸಿಕ್ರೆಟ್ ಎಂದು ಹೇಳುತ್ತಾನೆ.
ಈ ಬೈಕ್ ಸಾಧನೆ ದೊಡ್ಡ ಬೈಕ್‌ಗಳ ಸಾಧನೆಗಿಂತ ಉತ್ತಮವಾಗಿದೆಯಂತೆ. ಕೆಟಿಎಂ ಬೈಕಿನ ಪೆಟ್ರೋಲ್ ಟ್ಯಾಂಕ್ ಗೆ ಸರಿ ಹೊಂದುವ ಬ್ಯಾಟರಿ ಬಾಕ್ಸನ್ನು ಈತ ತಯಾರಿಸಿದ್ದಾನೆ. ಚಕ್ರಕ್ಕೆ ಹೆಚ್ಚುವರಿ ಹಬ್ ಮೋಟಾರ್ ಅಳವಡಿಸಿದ್ದಾನೆ. ಇದರಿಂದಾಗಿ ಬೈಕ್ ನ ಭಾರ ಹೆಚ್ಚಾಗಿ ಸ್ಥಿರತೆ ಸಿಗುತ್ತದೆ. ಉಳಿದಂತೆ ವಿನ್ಯಾಸದಲ್ಲಿ ಯಾವ ಬದಲಾವಣೆಯನ್ನೂ ಮಾಡಿಲ್ಲ. ಅದಲ್ಲದೇ ವಿದ್ಯುತ್ ಚಾರ್ಜರನ್ನು ಹಿಂದಿನ ಪೆಟ್ರೋಲ್ ಟ್ಯಾಂಕ್ ಮೇಲೆಯೇ ಅಳವಡಿಸಿದ್ದಾರೆ. ಇದು 4 ಗಂಟೆಗಳಲ್ಲಿ ಪೂರ್ಣ ಚಾರ್ಚ್ ಆಗುತ್ತದೆ. ಇನ್ನೂ ವೇಗದ ಚಾರ್ಜರ್ ಅಳವಡಿಸಬಹುದಾದರೂ, ಅದರಿಂದ ಬ್ಯಾಟರಿ ಬಾಳಿಕೆ ಕಡಿಮೆಯಾಗುತ್ತದೆ ಎನ್ನುತ್ತಾನೆ ಅಸದ್ ಅಬ್ದುಲ್ಲಾ.
ಗಂಟೆಗೆ 125 ಕಿ.ಮೀ. ಓಡುವ ಈ ಬೈಕ್, ರೆಗ್ಯುಲೇಟರ್ ಸೆಟ್ಟಿಂಗ್ ಬದಲಿಸಿದರೆ, ಗಂಟೆಗೆ 140 ಕಿ.ಮೀ. ಓಡುತ್ತದೆ. ಇಂಟರ್ನಲ್ ಕಂಬಷನ್ ಇಂಜಿನಿನ ಕೆಟಿಎಂ ಬೈಕ್ ಗಂಟೆಗೆ 160 ಕಿ.ಮೀ. ಓಡುತ್ತದೆ. ನಾನೀಗ ನನ್ನ ಬೈಕ್ ಓಡಿಸಲು ಒಂದು ಪೈಸೆಯನ್ನೂ ಖರ್ಚು ಮಾಡುವುದಿಲ್ಲ. ವಿದ್ಯುತ್ ಜಾರ್ಜನ್ನೂ ಮಾಡುವುದಿಲ್ಲ. ಮೇಲೊಂದು ಸೋಲಾರ್ ಪ್ಯಾನೆಲ್ ಅಳವಡಿಸಿದ್ದೇನೆ. ತನ್ನ ಸ್ವಂತ ಕಂಪೆನಿ ತೆರೆಯುವ ಯೋಚನೆಯಲ್ಲಿರುವ ಅವರು, ಹಣಕಾಸು ಒದಗಿಸಬಲ್ಲ ಪಾಲುದಾರರನ್ನು ಹುಡುಕುತ್ತಿದ್ದಾರಂತೆ.