ಖರೀದಿಸಿದ ಮೂರೇ ತಿಂಗಳಿಗೆ ಇಲೆಕ್ಟ್ರಿಕ್ ಬೈಕ್ ಅನ್ನು ಸುಟ್ಟು ಹಾಕಿದ ಮಾಲಕ
Friday, April 29, 2022
ಚೆನ್ನೈ: ಇತ್ತೀಚೆಗೆ ಜನಪ್ರಿಯಗೊಳ್ಳುತ್ತಿರುವ ಇಲೆಕ್ಟ್ರಿಕ್ ಬೈಕ್ ಗಳ ಗುಣಮಟ್ಟದ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದೆ. ಖರೀದಿಸಿದ ಕೆಲವೇ ದಿನಗಳಲ್ಲಿ ಬೈಕ್ ಕೆಟ್ಟುಹೋಗುತ್ತಿರುವುದರಿಂದ ವಾಹನ ಕೊಂಡವರು ಸಂಸ್ಥೆಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಆದ್ದರಿಂದ ಇಲೆಕ್ಟ್ರಿಕ್ ಬೈಕ್ ಖರೀದಿಸಿರುವ ಗ್ರಾಹಕರಿಗೆ ಹಣವೂ ಇಲ್ಲ, ಬೈಕೂ ಇಲ್ಲದಂತಾಗಿದೆ.
ಇದೇ ರೀತಿ ಗುಣಮಟ್ಟ ಚೆನ್ನಾಗಿದೆ ಎಂದು ನಂಬಿ ಖರೀದಿಸಿದ ಕೆಲವೇ ತಿಂಗಳಲ್ಲಿ ಇಲೆಕ್ಟ್ರಿಕ್ ಬೈಕ್ ಕೆಟ್ಟುಹೋಗಿದೆ. ಈ ಹಿನ್ನೆಲೆಯಲ್ಲಿ ಬೈಕ್ ಕೊಂಡವನೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅದನ್ನು ಸುಟ್ಟು ಹಾಕಿರುವ ವೀಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಓಲಾ ಕಂಪೆನಿಯ ಇಲೆಕ್ಟ್ರಿಕ್ ಬೈಕ್ಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ವತಃ ಸಂಸ್ಥೆಯೇ 1400 ಕ್ಕೂ ಅಧಿಕ ಬೈಕನ್ನು ಹಿಂಪಡೆದುಕೊಂಡಿತ್ತು. ಇದರ ಬೆನ್ನಲ್ಲೇ ಗ್ರಾಹಕರೂ ಕೂಡ ಇಷ್ಟಪಟ್ಟು ಖರೀದಿಸಿರುವ ಬೈಕ್ ಅಲ್ಪ ದಿನವೂ ಬಾಳಿಕೆ ಬರಲಿಲ್ಲ ಎಂದು ಹೇಳಿದ್ದಾರೆ.
ಈ ನಡುವೆ ತಮಿಳುನಾಡಿದ ಪೃಥ್ವಿರಾಜ್ ಎಂಬ ವ್ಯಕ್ತಿ ಜನವರಿಯಲ್ಲಿ ಇಲೆಕ್ಟ್ರಿಕ್ ಬೈಕ್ ಅನ್ನು ಖರೀದಿಸಿದ್ದಾರೆ. ಆ ವೇಳೆ ಸಂಸ್ಥೆ ಬೈಕ್ ಉತ್ತಮ ಗುಣಮಟ್ಟದ್ದಾಗಿದೆ ಎಂದು ಹೇಳಿತ್ತು. ಆದರೆ ಖರೀದಿಸಿದ ಮೂರೇ ತಿಂಗಳಿಗೆ ಬಣ್ಣ ಬಯಲಾಗಿತ್ತು. ಹಾಗಾಗಿ ಬೈಕನ್ನೇ ಸುಟ್ಟುಹಾಕುತ್ತಿದ್ದೇನೆ ಎಂದು ಹೇಳಿದ್ದಾನೆ.