ವಿದ್ಯುತ್ ಅವಘಡದಿಂದ ದಂಪತಿ, ಇಬ್ಬರು ಮಕ್ಕಳು ಸಜೀವ ದಹನ!
Friday, April 8, 2022
ವಿಜಯನಗರ: ವಿದ್ಯುತ್ ಅವಘಡದಿಂದ ಎಸಿ ಸ್ಫೋಟಗೊಂಡು ಮನೆಯಲ್ಲಿದ್ದ ನಾಲ್ವರು ಸಜೀವ ದಹನಗೊಂಡು ಮೃತಪಟ್ಟಿರುವ ದುರ್ಘಟನೆಯೊಂದು ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ನಡೆದಿದೆ.
ಈ ದುರ್ಘಟನೆಯಲ್ಲಿ ಮಕ್ಕಳಿಬ್ಬರು ಸೇರಿದಂತೆ ದಂಪತಿ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಮನೆಯಲ್ಲಿದ್ದ ಒಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರಿಯಮ್ಮನಹಳ್ಳಿಯ ವೆಂಕಟ್ ಪ್ರಶಾಂತ್ (42) ಡಿ.ಚಂದ್ರಕಲಾ (38) ಹಾಗೂ ಮಕ್ಕಳಾದ ಎಚ್.ಎ. ಅದ್ವಿಕ್ (16), ಪ್ರೇರಣಾ ( 8 ) ಸಜೀವವಾಗಿ ದಹನವಾಗಿ ಮೃತಪಟ್ಟಿದ್ದಾರೆ.
ಮರಿಯಮ್ಮನಹಳ್ಳಿಯ ರಾಘವೇಂದ್ರ ಶೆಟ್ಟಿ ಎಂಬವರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಪರಿಣಾಮ ಎಸಿ ಸ್ಪೋಟಗೊಂಡು ಈ ಬೆಂಕಿ ದುರಂತ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದ ಪರಿಣಾಮ ಮನೆಯಲ್ಲಿದ್ದವರು ಹೊರಬರಲಾಗದೆ ಸಜೀವವಾಗಿ ದಹನಗೊಂಡು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಘಟನೆಯಲ್ಲಿ ಮನೆಯಲ್ಲಿದ್ದ ರಾಘವೇಂದ್ರ ಶೆಟ್ಟಿಯವರ ಪತ್ನಿ ರಾಜಶ್ರೀಯವರು ಮನೆಯಿಂದ ಹೊರಗಡೆ ಓಡಿ ಬಂದು ಜೀವ ಉಳಿಸಿಕೊಂಡಿದ್ದಾರೆ. ಈ ಘಟನೆ ತಡರಾತ್ರಿ ನಡೆದ ನಡೆದಿದ್ದು, ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳ ರವಾನೆ ಮಾಡಲಾಗಿದೆ.