ಬೆಂಗಳೂರಿನಲ್ಲಿ ಹಾಡಹಗಲೇ ಪುತ್ರನಿಗೆ ಬೆಂಕಿ ಹಚ್ಚಿ ಕೊಂದ ತಂದೆ!
Thursday, April 7, 2022
ಬೆಂಗಳೂರು: ಹಾಡಹಗಲೇ ತಂದೆಯೊಬ್ಬ ತನ್ನ ಪುತ್ರನಿಗೆ ನಡುರಸ್ತೆಯಲ್ಲಿಯೇ ಬೆಂಕಿ ಹಚ್ಚಿ ಕೊಂದಿರುವ ಘಟನೆ ಅಜಾದ್ ನಗರದಲ್ಲಿ ಸಂಭವಿಸಿದೆ.
ಈ ಭೀಕರ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಇದರ ವೀಡಿಯೋ ವೈರಲ್ ಆಗಿದೆ. ತಂದೆಯಿಂದಲೇ ಮೃತಪಟ್ಟ ಪುತ್ರನ ಹೆಸರು ಅರ್ಪಿತ್. ಆರೋಪಿತ ತಂದೆ ಸುರೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಸುರೇಂದ್ರ ದೊಡ್ಡ ದೊಡ್ಡ ಬಿಲ್ಡಿಂಗ್ ಪ್ಯಾಬ್ರಿಕೇಷನ್ ನ ವ್ಯವಹಾರ ನಡೆಸುತ್ತಿದ್ದ. ಇದರ ಜವಾಬ್ದಾರಿಯನ್ನು ಪುತ್ರನಿಗೆ ಸುರೇಂದ್ರ ನೀಡಿದ್ದರು. ಆದರೆ ಈ ವ್ಯವಹಾರದಲ್ಲಿ ಸಾಕಷ್ಟು ಏರುಪೇರಾಗಿತ್ತು. ಹಣದ ಲೆಕ್ಕಾಚಾರದಲ್ಲೂ ವ್ಯತ್ಯಾಸ ಕಂಡುಬಂದಿತ್ತು. ಇದೇ ವಿಚಾರಕ್ಕೆ ಬಿಜಿನೆಸ್ ಮೆಟೀರಿಯಲ್ ಇಟ್ಟಿದ್ದ ಗೋದಾಮಿನಲ್ಲಿ ಕೆಲಸಗಾರರ ಮುಂದೆಯೇ ತಂದೆ ಮಗನಿಗೆ ಮಧ್ಯೆ ಎ.1ರ ಮಧ್ಯಾಹ್ನ ಗಲಾಟೆ ನಡೆದಿತ್ತು. ಈ ಸಂದರ್ಭ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆಗ ಪುತ್ರ ಅರ್ಪಿತ್ ತಂದೆಗೆ ‘ಸಾಯಿಸ್ತೀಯಾ ಸಾಯಿಸು ನೋಡೋಣ… ಲೆಕ್ಕ ಕೊಟ್ರು ಸಾಯಿಸ್ತೀಯಾ.. ಲೆಕ್ಕ ನೀಡದಿದ್ರೂ ಸಾಯಿಸ್ತೀಯಾ… ನಾನು ಲೆಕ್ಕ ಕೊಡಲ್ಲ’ ಎಂದು ಅರ್ಪಿತ್ ಕೂಗಾಡಿದ್ದಾನೆ.
ಅದಕ್ಕೆ ಸಿಟ್ಟಾದ ತಂದೆ, ಗೋದಾಮು ಬಳಿಯ ಮುಖ್ಯರಸ್ತೆಯಲ್ಲಿ ಪುತ್ರನಿಗೆ ಥಿನ್ನರ್ ಎರಚಿ ಬೆಂಕಿ ಹಚ್ಚಿದ್ದಾನೆ. ಪರಿಣಾಮ ಬೆಂಕಿಯಿಂದ ಸುಟ್ಟುಹೋಗಿ ನರಳಾಡುತ್ತಿದ್ದ ಪುತ್ರನನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಪೊಲೀಸರ ಮುಂದೆ ಅರ್ಪಿತ್ ನೀಡಿರುವ ಹೇಳಿಕೆ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಆಧಾರಿಸಿ ಚಾಮರಾಜಪೇಟೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಆದರೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅರ್ಪಿತ್ ಗುರುವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.