ಬೇರೊಬ್ಬನಿಂದ ಪರೀಕ್ಷೆ ಬರೆದು ಕೆಲಸ ಗಿಟ್ಟಿಸಿಕೊಂಡ ಆರೋಪ: ಪೇದೆ ಮೇಲೆ ಪ್ರಕರಣ ದಾಖಲು
Monday, April 4, 2022
ಬೆಂಗಳೂರು: ಮೀಸಲು ಪಡೆ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯನ್ನು ಬೇರೊಬ್ಬ ಅಭ್ಯರ್ಥಿಯಿಂದ ಬರೆಸಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿರುವ ಆರೋಪದಲ್ಲಿ ಪೇದೆಯೊಬ್ಬನ ವಿರುದ್ಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಎಸ್ಆರ್ಪಿ ಪಡೆ 1ನೇ ಬೆಟಾಲಿಯನ್ ಸಹಾಯಕ ಕಮಾಂಡೆಂಟ್ ಎಂ.ಜಿ.ಸುರೇಶ್ ಈ ಬಗ್ಗೆ ದೂರು ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕು ದಡೇರಹಟ್ಟಿ ನಿವಾಸಿ ಸಿದ್ದು ಕುರಿ ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿದೆ.
2020ರ ಮಾರ್ಚ್ 28ರಂದು ಪೊಲೀಸ್ ಇಲಾಖೆಯ ವಿಶೇಷ ಸಶಸ್ತ್ರ ಮೀಸಲು ಪಡೆ ಕಾನ್ಸ್ಟೇಬಲ್ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿರುವ ವ್ಯಕ್ತಿಯ ಬದಲಿಗೆ ಲಿಖಿತ ಪರೀಕ್ಷೆ, ದೇಹದಾರ್ಡ್ಯ ಮತ್ತು ಸಹಿಷ್ಣುತೆ ಪರೀಕ್ಷೆಗಳಿಗೆ ಅರ್ಜಿದಾರನ ಬದಲಿಗೆ ಬೇರೊಬ್ಬ ಭಾಗವಹಿಸಿದ್ದಾನೆ ಎಂದು ಬೆಳಗಾವಿ ಕೆಎಸ್ಆರ್ಪಿ ಐಜಿಪಿ ಶಂಖೆ ವ್ಯಕ್ತಪಡಿಸಿದ್ದಾರೆ. ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಗೊಂಡ ಬಳಿಕ ದಾಖಲೆ ಪರಿಶೀಲನೆಗೆ ಹಾಗೂ ವೈದ್ಯಕೀಯ ಪರೀಕ್ಷೆಗೆ ಖುದ್ದು ಅಭ್ಯರ್ಥಿಯೇ ಭಾಗವಹಿಸಿದ್ದಾನೆಯೇ? ಅಥವಾ ಬೇರೆ ಅಭ್ಯರ್ಥಿ ಹಾಜರಾಗಿದ್ದಾನೆಯೇ? ಎಂಬುದರ ತನಿಖೆ ನಡೆಸುವಂತೆ ದೂರಿನಲ್ಲಿ ಸುರೇಶ್ ಮನವಿ ಮಾಡಿದ್ದಾರೆ. ಈ ದೂರಿನ್ವಯ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಸಹ ಕೆಎಸ್ಆರ್ಪಿ ಕಾನ್ಸ್ಟೇಬಲ್ ನೇಮಕಾತಿಯಲ್ಲಿ ಬದಲಿ ಅಭ್ಯರ್ಥಿಗಳು ಪರೀಕ್ಷೆ ಬರೆದಿರುವುದು ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ಪತ್ತೆಯಾಗಿತ್ತು.