ಸರಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ ಮದ್ಯ ಕುಡಿಸಿ ಯುವತಿಯರಿಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ: ದೂರು ದಾಖಲು
Thursday, April 21, 2022
ನೋಯ್ಡಾ (ಉತ್ತರ ಪ್ರದೇಶ): ಸರಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ ಯುವಕರಿಬ್ಬರು ತಮ್ಮ ಮೇಲೆ ಗ್ಯಾಂಗ್ ರೇಪ್ ಮಾಡಿದ್ದಾರೆಂದು ಇಬ್ಬರು ಯುವತಿಯರು ಆರೋಪಿಸಿರುವ ಘಟನೆಯೊಂದು ಉತ್ತರ ಪ್ರದೇಶದ ನೋಯ್ಡಾ ಸೆಕ್ಟರ್ 63ರಲ್ಲಿ ಬೆಳಕಿಗೆ ಬಂದಿದೆ. ತಮ್ಮ ಮೇಲಿನ ಈ ಅತ್ಯಾಚಾರವನ್ನು ವಿರೋಧಿಸಿದ ಸಂದರ್ಭ ಆರೋಪಿಗಳು ತಮಗೆ ಥಳಿಸಿದ್ದಾರೆ ಎಂದು ಯುವತಿಯರು ದೂರಿದ್ದಾರೆ.
ಸರಕಾರಿ ಉದ್ಯೋಗಕ್ಕಾಗಿ ಸಂದರ್ಶನ ಮಾಡಬೇಕೆಂದು ಆರೋಪಿಗಳು ತಮ್ಮನ್ನು ಕರೆಸಿಕೊಂಡಿದ್ದರು. ಆದರೆ, ಅಲ್ಲಿಗೆ ಹೋದ ಬಳಿಕ ತಮಗೆ ಮದ್ಯವನ್ನು ಕುಡಿಸಿ ಅತ್ಯಾಚಾರ ಎಸಗಲಾಗಿದೆ ಎಂದು ಸಂತ್ರಸ್ತೆಯರು ಪೊಲೀಸರಿಗೆ ದೂರು ನೀಡಿದ್ದಾರೆ. ಕೊಠಡಿಯಲ್ಲಿ ಈ ಇಬ್ಬರು ಯುವತಿಯರು ಹಾಗಯ ಆರೋಪಿ ಯುವಕರ ನಡುವೆ ಗದ್ದಲ, ಗಲಾಟೆ ನಡೆದಿದೆ. ಇದನ್ನು ಕೇಳಿ ಸ್ಥಳೀಯರು ಕೊಠಡಿ ಹೊರಗೆ ಸೇರಿದ್ದು, ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ತೆರಳಿ ನಾಲ್ವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬರಲಾಗಿತ್ತು.
ಆದರೆ, ಪೊಲೀಸ್ ಠಾಣೆಗೆ ಕರೆದೊಯ್ದ ಸಂದರ್ಭ ನಾಲ್ವರೂ ಮದ್ಯದ ಅಮಲಿನಲ್ಲಿದ್ದರು. ಠಾಣೆಯಲ್ಲಿ ನಾಲ್ವರೂ ಸುಮಾರು 3 ಗಂಟೆಗಳ ಕಾಲ ಗದ್ದಲ ಸೃಷ್ಟಿಸಿದ್ದರು ಎನ್ನಲಾಗಿದೆ. ಇದಾದ ಬಳಿಕ ಯುವತಿಯರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಪ್ರಾಥಮಿಕ ತನಿಖೆಯ ಆಧಾರದನ್ವಯ ಸದ್ಯ ಈ ಬಗ್ಗೆ ಕ್ರಮ ಕೈಗೊಂಡಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಸೆಂಟ್ರಲ್ ನೋಯ್ಡಾದ ಹೆಚ್ಚುವರಿ ಡಿಸಿಪಿ ಇಳಮಾರನ್ ತಿಳಿಸಿದ್ದಾರೆ.