ಮತ್ತೊಂದು ವಿವಾದದ ಕಿಡಿ: ಪುತ್ತೂರು ಶ್ರೀಮಹಾಲಿಂಗೇಶ್ವರ ಜಾತ್ರೋತ್ಸವಕ್ಕೆ ಬರುವವರು ಹಿಂದೂಗಳ ಆಟೋಗಳನ್ನೇ ಬಳಸುವಂತೆ ಹಿಂದೂ ಜಾಗರಣ ವೇದಿಕೆ
Saturday, April 9, 2022
ಮಂಗಳೂರು: ಹಿಂದೂ ದೇವಾಲಯಗಳ ಜಾತ್ರೋತ್ಸವಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರ ನಿರ್ಬಂಧದ ವಿವಾದ ತಾರಕಕ್ಕೇರಿರುವ ನಡುವೆಯೇ ಪುತ್ತೂರು ಶ್ರೀಮಹಾಲಿಂಗೇಶ್ವರ ಜಾತ್ರೋತ್ಸವಕ್ಕೆ ಬರುವವರು ಹಿಂದೂಗಳ ಆಟೋಗಳನ್ನೇ ಬಳಸುವಂತೆ ಹಿಂದೂ ಜಾಗರಣ ವೇದಿಕೆ ಅಭಿಯಾನವೊಂದನ್ನು ಆರಂಭಿಸಿದೆ.
ಎಲ್ಲಾ ಆಟೋಗಳಿಗೂ ಭಗವಾಧ್ವಜ ನೀಡಿ ಅಭಿಯಾನವನ್ನು ಆರಂಭಿಸಲಾಗಿದೆ. ಅಲ್ಲದೆ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಾತ್ರೆಗೆ ಬರುವ ಹಿಂದೂ ಭಕ್ತಾದಿಗಳು ಭಗವಾಧ್ವಜ ಹಾಕಿರುವ ಆಟೋಗಳನ್ನೇ ಆಯ್ಕೆ ಮಾಡಬೇಕೆಂದು ಮನವಿ ಮಾಡಿದೆ.
ಜಾತ್ರೆಯ ನೆಪದಲ್ಲಿ ಅನ್ಯಧರ್ಮೀಯರಿಂದ ಹಿಂದೂ ಹೆಣ್ಣುಮಕ್ಕಳಿಗೆ ತೊಂದರೆಯಾಗುತ್ತಿದೆ. ಜಾತ್ರೆಗೆ ಬರುವ ನೆಪದಲ್ಲಿ ಹಿಂದೂ ಹೆಣ್ಣುಮಕ್ಕಳಿಗೆ ಅನ್ಯಮತೀಯರು ಮೋಸ ಮಾಡುತ್ತಾರೆಂದು ಹಿಂಜಾವೇ ಆರೋಪ ಮಾಡಿದೆ.
ಅಲ್ಲದೆ ಎಪ್ರಿಲ್ 10 ರಿಂದ 20 ರವರೆಗೆ ಆಟೋಗಳು ಕೇಸರಿ ಧ್ವಜವನ್ನು ಹಾಕಿ ಓಡಾಟ ನಡೆಸುವಂತೆ ಮನವಿ ಮಾಡಿದೆ. ಹಿಂದೂ ಹೆಣ್ಣುಮಕ್ಕಳನ್ನು ಹಿಂದೂಗಳೇ ರಕ್ಷಿಸಬೇಕಾದ ಸಮಯ ಬಂದಿದೆ. ಹಿಂದುತ್ವದ ಹೆಸರಿನಲ್ಲಿ ಬಂದ ಸರಕಾರ ಹಿಂದೂಗಳಿಗೆ ಸಹಕಾರ ನೀಡುತ್ತಿಲ್ಲ. ಹಿಂದೂಗಳ ಮೇಲೆಯೇ ಕೇಸುಗಳನ್ನು ದಾಖಲಿಸುತ್ತಿದೆ. ಹಿಂದೂ ಹೆಣ್ಣುಮಕ್ಕಳನ್ನು ರಕ್ಷಿಸುವ ಕೆಲಸವನ್ನು ಸಂಘಟನೆಗಳು ನಿರಂತರ ಮಾಡಲಿದೆ. ಈ ಅಭಿಯಾನದ ಒಂದು ಭಾಗ ಆಟೋಗಳಿಗೆ ಭಗವಾಧ್ವಜ ಹಾಕಿ ಹಿಂದುತ್ವ ಉಳಿಸುವ ಕಾರ್ಯ ಮಾಡಬೇಕೆಂದು ಹಿಂದೂ ಜಾಗರಣ ವೇದಿಕೆಯ ಮುಖಂಡರ ಸ್ಪಷ್ಟನೆ ನೀಡಿದ್ದಾರೆ.