ಲಾಕ್ ಡೌನ್ ನಲ್ಲಿ ಅಸುರಕ್ಷಿತ ಲೈಂಗಿಕ ಕ್ರಿಯೆ: ಎಚ್ಐವಿಯಲ್ಲಿ ರಾಜ್ಯ ಮೂರನೇ ಸ್ಥಾನಕ್ಕೆ
Thursday, April 28, 2022
ನವದೆಹಲಿ: ಕೋವಿಡ್-19 ಲಾಕ್ಡೌನ್ ಸಂದರ್ಭ ನಡೆದಿರುವ ಅಸುರಕ್ಷಿತ ಲೈಂಗಿಕ ಕ್ರಿಯೆಯ ಪರಿಣಾಮ ಮಾರಕ ಸಂಗತಿಯೊಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿರುವ ಪ್ರಶ್ನೆಯಿಂದ ಬಹಿರಂಗಗೊಂಡಿದೆ.
ಮಧ್ಯಪ್ರದೇಶದ ಆರ್ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌರ್ ಎಂಬವರು ಕೇಳಿರುವ ಪ್ರಶ್ನೆಗೆ ದೊರಕಿರುವ ಉತ್ತರದಿಂದ ಭಯಾನಕ ವಿಚಾರವೊಂದು ಬೆಳಕಿಗೆ ಬಂದಿದೆ. ಇವರು ಸಲ್ಲಿಸಿರುವ ಅರ್ಜಿಗೆ ರಾಷ್ಟ್ರೀಯ ಏಯ್ಡ್ಸ್ ತಡೆ ಸಂಸ್ಥೆ (ಎನ್ಎಸಿಒ-ನ್ಯಾಕೋ) ನೀಡಿರುವ ಉತ್ತರ ಈಗ ಎಲ್ಲರನ್ನೂ ಆತಂಕಕ್ಕೆ ಎಡೆ ಮಾಡುವಂತೆ ಮಾಡಿದೆ.
ಲಾಕ್ಡೌನ್ ಅವಧಿಯಲ್ಲಿನ ಅಸುರಕ್ಷಿತ ಸಂಭೋಗದಿಂದ ದೇಶದಲ್ಲಿ 85 ಸಾವಿರಕ್ಕೂ ಅಧಿಕ ಮಂದಿ ಎಚ್ಐವಿ ಸೋಂಕಿಗೆ ಒಳಗಾಗಿದ್ದಾರೆ ಎಂದು ನ್ಯಾಕೋ ಅಂಕಿ-ಅಂಶ ತಿಳಿಸಿದೆ. ಈ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 10,498, ಆಂಧ್ರಪ್ರದೇಶದಲ್ಲಿ 9521, ಕರ್ನಾಟಕದಲ್ಲಿ 8947, ಮಧ್ಯಪ್ರದೇಶದಲ್ಲಿ 3037 ಮತ್ತು ಪಶ್ಚಿಮ ಬಂಗಾಳದಲ್ಲಿ 2757 ಮಂದಿ ಎಚ್ಐವಿ ಸೋಂಕಿಗೆ ಒಳಗಾಗಿದ್ದಾರೆ ಎಂದು ನ್ಯಾಕೋ ಹೇಳಿದೆ. ಈ ಮೂಲಕ ಇಡೀ ದೇಶದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.