man killed his wife - ಅಶ್ಲೀಲ ಚಿತ್ರದಲ್ಲಿರುವುದು ಪತ್ನಿ ಎಂದು ಶಂಕಿಸಿ ಪತ್ನಿಯ ಬರ್ಬರ ಹತ್ಯೆ!
ಅಶ್ಲೀಲ ಚಿತ್ರದಲ್ಲಿರುವುದು ಪತ್ನಿ ಎಂದು ಶಂಕಿಸಿ ಪತ್ನಿಯ ಬರ್ಬರ ಹತ್ಯೆ!
ಅಶ್ಲೀಲ ವಿಡಿಯೋಗಳ ದಾಸನಾಗಿದ್ದ ಪತಿ, ತಾನು ವೀಕ್ಷಿಸುತ್ತಿದ್ದ ವಿಡಿಯೋದಲ್ಲಿ ಇರುವ ಮಹಿಳೆ ತನ್ನ ಪತ್ನಿ ಎಂದು ಭಾವಿಸಿ, ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಮನಗರ ಪಟ್ಟಣದಲ್ಲಿ ನಡೆದಿದೆ.
40 ವರ್ಷ ವಯಸ್ಸಿನ ಜಹೀರ್ ಪಾಶಾ ಹತ್ಯೆ ಆರೋಪಿಯಾಗಿದ್ದು, ಈತನ ಪತ್ನಿ 35 ವರ್ಷ ವಯಸ್ಸಿನ ಮುಬೀನಾ ಹತ್ಯೆಯಾದ ಮಹಿಳೆಯಾಗಿದ್ದಾರೆ. ಅಶ್ಲೀಲ ವಿಡಿಯೋ ನೋಡುವ ವಿಪರೀತ ಚಟ ಹೊಂದಿದ್ದ ಜಹೀರ್ ಪಾಶಾ, ತಾನು ನೋಡಿದ್ದ ಅಶ್ಲೀಲ ವಿಡಿಯೋದಲ್ಲಿರುವ ಮಹಿಳೆ ತನ್ನ ಪತ್ನಿ ಎಂದು ಭಾವಿಸಿ ಪತ್ನಿಯ ಶೀಲದ ಬಗ್ಗೆ ಶಂಕಿಸಲು ಆರಂಭಿಸಿದ್ದ.
ಎರಡು ತಿಂಗಳ ಹಿಂದೆ ಕುಟುಂಬದ ಕಾರ್ಯಕ್ರಮವೊಂದಲ್ಲಿ ಎಲ್ಲರ ಎದುರೇ ಪತ್ನಿಯನ್ನು ಥಳಿಸಿದ್ದ ಎನ್ನಲಾಗಿದೆ.
ಈ ಘಟನೆಯ ಬಳಿಕವೂ ಈತನ ರಾದ್ಧಾಂತ ಮುಗಿದಿರಲಿಲ್ಲ. ಭಾನುವಾರ ಇದೇ ವಿಚಾರಕ್ಕೆ ಮತ್ತೆ ಜಗಳ ಆರಂಭಿಸಿದ್ದ ಜಹೀರ್ ಪತ್ನಿಯನ್ನು ಮಕ್ಕಳ ಎದುರೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಕುಟುಂಬಸ್ಥರಿಗೆ ಮಹಿಳೆಯ ಪುತ್ರ ತಿಳಿಸಿದ್ದಾನೆ.
ಘಟನೆ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 15 ವರ್ಷಗಳ ಹಿಂದೆ ಈ ಜೋಡಿ ಮದುವೆಯಾಗಿದ್ದರು ಎನ್ನಲಾಗಿದೆ.
ಇದೀಗ ಪತಿಯ ಚಟ, ಅನುಮಾನಕ್ಕೆ ಪತ್ನಿ ಪ್ರಾಣ ಕಳೆದುಕೊಂಡಿದ್ದಾಳೆ. ತಾಯಿ ಸಾವಪ್ಪಿದ್ದು, ತಂದೆ ಜೈಲು ಪಾಲಾಗಿ ಮಕ್ಕಳು ಅನಾಥರಾಗಿದ್ದಾರೆ.