Mangaluru: ಅಪಘಾತ ದುರಂತದಲ್ಲಿ ಮಿದುಳು ನಿಷ್ಕ್ರಿಯಗೊಂಡ ಮಹಿಳೆಯ ಅಂಗಾಂಗ ದಾನ; ಸಾವಿನಲ್ಲೂ ಸಾರ್ಥಕತೆ ಮೆರೆದ ಕುಟುಂಬ!
Saturday, April 23, 2022
ಮಂಗಳೂರು: ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ಮಾಡುತ್ತಿದ್ದ ಮಹಿಳೆಯ ಮಿದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅವರ ಅಂಗಾಂಗಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಮೆದುಳು ನಿಷ್ಕ್ರಯಗೊಂಡಿರುವ ಪ್ರೀತಿ ಮನೋಜ್ ಅವರ ಅಂಗಾಂಗ ದಾನಕ್ಕೆ ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ. ಅವರ ಲಿವರ್ ಅನ್ನು ಬೆಂಗಳೂರಿನ ಆ್ಯಸ್ಟರ್ ಸಿಎಂಐ ಆಸ್ಪತ್ರೆಗೆ ಝೀರೋ ಟ್ರಾಫಿಕ್ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರವಾನಿಸಲಾಯಿತು. ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲದೆ ಕಿಡ್ನಿಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗುವ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ. ಆಸ್ಪತ್ರೆಯ ಜೀವ ಸಾರ್ಥಕತೆಯ ವಿಭಾಗವು ಅಂಗಾಂಗಗಳನ್ನು ರವಾನಿಸುವ ವ್ಯವಸ್ಥೆಯನ್ನು ಮಾಡಿದೆ.
ಎ.9ರಂದು ಮಂಗಳೂರಿನ ಬಳ್ಳಾಲ್ ಬಾಗ್ ನಲ್ಲಿ ನಡೆದಿರುವ ಅಪಘಾತವೊಂದರಲ್ಲಿ ಪ್ರೀತಿ ಮನೋಜ್ ಗಂಭೀರವಾಗಿ ಗಾಯಗೊಂಡಿದ್ದರು. ಶ್ರವಣ್ ಕುಮಾರ್ ಎಂಬಾತ ಅಜಾಗರೂಕತೆಯಿಂದ ಬಿಎಂಡಬ್ಲ್ಯು ಕಾರನ್ನು ಚಲಾಯಿಸಿಕೊಂಡು ಬಂದು ರಸ್ತೆ ವಿಭಾಜಕ ದಾಟಿ ಪ್ರೀತಿ ಮನೋಜ್ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸಹಿತ ನಾಲ್ಕು ವಾಹನಗಳಿಗೆ ಢಿಕ್ಕಿ ಹೊಡೆದಿದ್ದನು. ಪರಿಣಾಮ ಪ್ರೀತಿ ಮನೋಜ್ ಹಾಗೂ ಮತ್ತೋರ್ವ ಬಾಲಕ ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡು ಎ.ಜೆ. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪ್ರೀತಿ ಮನೋಜ್ ಜೀವನ್ಮರಣ ಸ್ಥಿತಿಯಲ್ಲಿ 13 ದಿನಗಳ ಹೋರಾಟ ನಡೆಸುತ್ತಿದ್ದರು. ನಿನ್ನೆ ಅವರ ಮಿದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ವೈದ್ಯರು ಘೋಷಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಈ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.