ದಂಪತಿ ನಡುವೆ ನಡೆದ ಜಗಳ ಪತ್ನಿಯ ಕೊಲೆಯೊಂದಿಗೆ ಅಂತ್ಯ
Saturday, April 2, 2022
ಬೆಂಗಳೂರು:ದಂಪತಿ ನಡುವಿನ ಉಂಟಾಗಿರುವ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಸಂಚಿ ಉರವ್ (36) ಕೊಲೆಯಾದ ಪತ್ನಿ. ಈಕೆಯ ಪತಿ ಪೂಲ್ ಚಂದ್ ಉರವ್ (40) ಬಂಧಿತ ಆರೋಪಿ.
ಪಶ್ಚಿಮ ಬಂಗಾಳ ಮೂಲದ ದಂಪತಿ ಬೆಂಗಳೂರಿನಲ್ಲಿ ಕಟ್ಟೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದರು. ಈ ದಂಪತಿ ನಗರದಲ್ಲಿ ಬಿಸುರಾಯ್ ಎಂಬ ಗುತ್ತಿಗೆದಾರನ ಬಳಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದರು. ವಿಧಾನಸೌಧ ಸಮೀಪದ ಹೋಟೆಲ್ ಪಕ್ಕದಲ್ಲಿರುವ ಕಟ್ಟಡದ ನೆಲ ಮಹಡಿಯಲ್ಲಿ ದಂಪತಿ ಹಾಗೂ ಇತರ ಆರು ಮಂದಿ ಕಾರ್ಮಿಕರು ವಾಸಿಸುತ್ತಿದ್ದರು.
ಆದರೆ ದಂಪತಿ ಮಧ್ಯೆ ಕೌಟುಂಬಿಕ ವಿಚಾರಕ್ಕೆ ಪ್ರತಿದಿನ ಜಗಳವಾಗುತ್ತಿತ್ತು. ಮಾ.26ರಂದು ಕಟ್ಟಡಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶ್ರೀಧರ್‌ಗೆ ಕರೆ ಮಾಡಿರುವ ಗುತ್ತಿಗೆದಾರ ಬಿಸುರಾಯ್, ‘ಸಂಚಿ ಎರಡು ದಿನಗಳಿಂದ ಮನೆಯಿಂದ ಹೊರಗಡೆ ಬಂದಿಲ್ಲ. ಮಾತನಾಡದೆ ಮಲಗಿದ್ದಾಳೆ’ ಎಂದು ತಿಳಿಸಿದ್ದಾರೆ. ತಕ್ಷಣ ಶ್ರೀಧರ್ ಸ್ಥಳಕ್ಕೆ ಬಂದು ನೋಡಿದಾಗ, ಆಕೆಯ ಮುಖದ ಮೇಲೆ ಕಪ್ಪುಕಲೆಯಾಗಿತ್ತು. ಬಾಯಿಂದ ನೊರೆ ಬಂದಿರುವುದು ಕಂಡು ಬಂದಿತ್ತು.
ತಕ್ಷಣ ಶ್ರೀಧರ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ‘ಇಬ್ಬರ ನಡುವೆ ಜಗಳ ನಡೆದು ಪತ್ನಿಯ ಮುಖ ಹಾಗೂ ಕೆನ್ನೆ ಭಾಗಕ್ಕೆ ಬಲವಾಗಿ ಹೊಡೆದಿದ್ದು, ಆಕೆ ಮೃತಪಟ್ಟಿದ್ದಾಳೆ ಎಂದು ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ.