ಅಶ್ಲೀಲ ವೀಡಿಯೋದಲ್ಲಿ ಪತ್ನಿಯ ಹೋಲಿಕೆಯ ಮಹಿಳೆಯ ವೀಡಿಯೋ: ಚೂರಿಯಿಂದ ಇರಿದು ಕೈಹಿಡಿದಾಕೆಯನ್ನೇ ಕೊಂದ ಪತಿ
Wednesday, April 20, 2022
ರಾಮನಗರ: ಅನ್ಯ ಪುರುಷನೊಂದಿಗೆ ಅಶ್ಲೀಲ ವೀಡಿಯೋದಲ್ಲಿ ಪತ್ನಿ ಕಾಣಿಸಿಕೊಂಡಿದ್ದಾಳೆಂದು ಅನುಮಾನಗೊಂಡು ಪತಿಯೋರ್ವನು ಕೈಹಿಡಿದಾಕೆಯನ್ನೇ ಚೂರಿಯಿಂದ ಇರಿದು ಬರ್ಬರವಾಗಿ ಕೊಲೆಗೈದಿರುವ ಘಟನೆ ನಡೆದಿದೆ.
ಆಟೋರಿಕ್ಷಾ ಚಾಲಕ ಜಹೀರ್ ಪಾಷಾ(40) ಕೊಲೆ ಆರೋಪಿ. ಈತ 35 ವರ್ಷದ ಪತ್ನಿಯನ್ನು ತನ್ನ ಮಕ್ಕಳ ಮುಂಭಾಗವೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ಕಳೆದ 15 ವರ್ಷಗಳ ಹಿಂದೆ ಈತ ವಿವಾಹವಾಗಿದ್ದ. ಆದರೆ ಪತ್ನಿಯು ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕೆಹೊಂದಿರುವ ಈತ ನಿರಂತರ ಆಕೆಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಎರಡು ತಿಂಗಳ ಹಿಂದೆ ಜಹೀರ್ ಪಾಷಾ ನೀಲಿ ಚಿತ್ರವೊಂದನ್ನು ವೀಕ್ಷಿಸಿದ್ದಾನೆ. ಅದರಲ್ಲಿ ತನ್ನ ಪತ್ನಿಯ ಹೋಲಿಕೆ ಇದ್ದಿರುವ ಮಹಿಳೆಯನ್ನು ನೋಡಿದ್ದಾನೆ. ಈಕೆ ತನ್ನ ಪತ್ನಿಯೇ ಅಂದುಕೊಂಡಿದ್ದಾನೆ.
ಇದೇ ಅನುಮಾನದಲ್ಲಿ ಈತ ಕುಟುಂಬದ ಸಮಾರಂಭವೊಂದರಲ್ಲೂ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಕಳೆದ 20 ದಿನಗಳ ಹಿಂದೆ ಪತ್ನಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆಯನ್ನು ನಡೆಸಿದ್ದನಂತೆ. ಪರಿಣಾಮ ಆಕೆಗೆ ಚಿಕಿತ್ಸೆಯನ್ನು ಕೊಡಿಸಲಾಗಿತ್ತು ಎಂದು ಆಕೆಯ ತಂದೆ ಗೌಸ್ ಪಾಷಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದೆಲ್ಲದರ ನಡುವೆ ಮತ್ತೆ ಇದೇ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ಜಹೀರ್ ಪಾಷಾ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಇದನ್ನು ನೋಡಿ ಭೀತಿಗೊಳಗಾದ ಆತನ ಪುತ್ರ ಸಮೀಪದಲ್ಲೇ ಇದ್ದ ತಾತನ ಮನೆಗೆ ಹೋಗಿ ಮಾಹಿತಿ ನೀಡಿದ್ದಾನೆಂದು ರಾಮನಗರ ಎಸ್ಪಿ ಸಂತೋಷ್ ಬಾಬು ತಿಳಿಸಿದ್ದಾರೆ.