-->
ಮಂಡ್ಯದ ವಿದ್ಯಾರ್ಥಿನಿ 'ಮುಸ್ಕಾನ್' ಗುಣಗಾನ ಮಾಡಿದ ಅಲ್ ಖೈದಾ ಉಗ್ರ!

ಮಂಡ್ಯದ ವಿದ್ಯಾರ್ಥಿನಿ 'ಮುಸ್ಕಾನ್' ಗುಣಗಾನ ಮಾಡಿದ ಅಲ್ ಖೈದಾ ಉಗ್ರ!

ನವದೆಹಲಿ: ಹಿಜಾಬ್​ ವಿವಾದ ಸಂದರ್ಭ 'ಜೈ ಶ್ರೀರಾಮ್' ಘೋಷಣೆಗೆ ಪ್ರತಿಯಾಗಿ 'ಅಲ್ಲಾಹು ಅಕ್ಬರ್'​ ಎಂದು ಕೂಗಿದ್ದ ಮಂಡ್ಯದ ಮುಸ್ಲಿಂ ವಿದ್ಯಾರ್ಥಿನಿ ಮುಸ್ಕಾನ್‌ ಖಾನ್​ ಬಗ್ಗೆ ಅಲ್​ಖೈದಾ ಮುಖ್ಯಸ್ಥ ಅಮನ್-ಅಲ್​-ಜವಾಹಿರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಅಲ್ಲದೆ, ಇಸ್ಲಾಂ ಮೇಲೆ ಆಕ್ರಮಣ ಮಾಡುವುದನ್ನು ನಿಗ್ರಹಿಸಿ ಎಂದೂ ಆತ ಕರೆ ಕೊಟ್ಟಿದ್ದಾನೆ. ಅಲ್​ಖೈದಾದ ಮುಖವಾಣಿ ಅಸ್​-ಸಾಹಬ್​ ಎಂಬ ಸಾಮಾಜಿಕ ಜಾಲತಾಣದಲ್ಲಿ ಅಮನ್-ಅಲ್​-ಜವಾಹಿರಿ ಈ ಬಗ್ಗೆ ಮಾತನಾಡಿದ್ದ 9 ನಿಮಿಷಗಳ ವಿಡಿಯೋವನ್ನು ಶೇರ್​ ಮಾಡಲಾಗಿದೆ.

'ಆ ವಿದ್ಯಾರ್ಥಿನಿಯ ಘೋಷಣೆಯು ಮೆಚ್ಚುವಂತಹದ್ದು. ಆಕೆ ಜಿಹಾದ್ ಚೈತನ್ಯವನ್ನು ಹುರಿದುಂಬಿಸಿದ್ದಾಳೆ. ಆಕೆಯ ಘೋಷಣೆ ನನ್ನಲ್ಲಿ ಸ್ಫೂರ್ತಿಯನ್ನು ತುಂಬಿದೆ. ಆಕೆಗಾಗಿ ನಾನು ಹಲವು ಸಾಲುಗಳ ಕವಿತೆಯೊಂದನ್ನು ಬರೆದಿದ್ದೇನೆ. ನನ್ನ ಪದ್ಯಗಳ ಮೂಲಕ ಕೊಡುವ ಈ ಕೊಡುಗೆಯನ್ನು ಆ ಸಹೋದರಿ ಸ್ವೀಕರಿಸುತ್ತಾಳೆ ಎಂದು ನಂಬಿದ್ದೇನೆ ಎಂದು ಆತ ಹೇಳಿದ್ದಾನೆ.

'ಮುಸ್ಕಾನ್‌ ಖಾನ್​ಗಾಗಿ ಬರೆದ ಕವಿತೆಯನ್ನು ಉಗ್ರ ಅಮನ್-ಅಲ್​-ಜವಾಹಿರಿ ಓದಿದ್ದಾನೆ. 'ನಾನು ಶರಣಾಗುವುದಿಲ್ಲ. ಧೈರ್ಯದಿಂದ ಹಿಜಾಬ್​ ಪರವಾಗಿ ಘೋಷಿಸಿದ್ದೇನೆ. ಹಿಜಾಬ್​ ಧರಿಸುವುದು ನನ್ನ ನಂಬಿಕೆಯಿಂದ ಕಲಿತಿರುವೆ. ಹೀಗಾಗಿ ಹಿಜಾಬ್​ಗಾಗಿ ಘೋಷಣೆ ಕೂಗಿದೆ.' ಜೊತೆಗೆ ಪಾಶ್ಚಿಮಾತ್ಯ ಜಗತ್ತಿನಲ್ಲಿ ಕೀಳರಿಮೆಯಿಂದ ಇರುವ ಮುಸ್ಲಿಂ ಸಹೋದರಿಯರಿಗೆ ಪ್ರಾಯೋಗಿಕವಾದ ಪಾಠವನ್ನು ಈಕೆ ಕಲಿಸಿದ್ದಾಳೆ. ಇದಕ್ಕೆ ಈಕೆಗೆ ಅಲ್ಲಾಹನು ಹೆಚ್ಚಿನ ಪ್ರತಿಫಲ ನೀಡಲಿ ಎಂದೂ ಹೇಳಿದ್ದಾನೆ.

ಹಿಂದೂ ಭಾರತದ ವಾಸ್ತವ ಮತ್ತು ಅದರ ಅಸಂಸ್ಕೃತ ಪ್ರಜಾಪ್ರಭುತ್ವದ ವಂಚನೆಯನ್ನು ಈ ಮುಸ್ಲಿಂ ವಿದ್ಯಾರ್ಥಿನಿ ಬಹಿರಂಗ ಪಡಿಸಿದ್ದಾಳೆ. ಭಾರತ ಉಪಖಂಡದಲ್ಲಿರುವ ನಮ್ಮ ಮುಸ್ಲಿಮರ ಹೋರಾಟವನ್ನು ಜಾಗೃತಗೊಳಿಸಿದ್ದಾಳೆ. ಚೀನಾದಿಂದ ಇಸ್ಲಾಮಿಕ್ ಮಗ್ರೆಬ್‌ ಮತ್ತು ಕಾಕಸಸ್‌ನಿಂದ ಸೊಮಾಲಿಯಾದವರೆಗೆ ಹಲವಾರು ರಂಗಗಳಲ್ಲಿ ಸಂಘಟಿತ ಹೋರಾಟ ನಡೆಸುವ ಸಮುದಾಯಕ್ಕೆ ಷರಿಯಾವನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ಸಮುದಾಯ ಒಂದಾಗುವುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ ಎಂದೂ ತಿಳಿಸಿದ್ದಾನೆ. 

ಈ ಮೂಲಕ ವೀಡಿಯೋದಲ್ಲಿ ಕಾಣಿಸಿಕೊಳ್ಳುವ ಮೂಲಕ ತಾನು ಇನ್ನೂ ಜೀವಂತ ಇದ್ದೇನೆ ಎಂದು ಜವಾಹಿರಿ ತೋರಿದ್ದಾನೆ. 2011ರಲ್ಲಿ ಲಾಡೆನ್​ ಹತ್ಯೆ ಬಳಿಕ ಆತನೇ ಅಲ್​ಖೈದಾ ನಾಯಕನಾಗಿದ್ದ. ಆದರೆ 2020ರಲ್ಲಿ ಸಹಜ ಕಾರಣಗಳಿಂದ ಮೃತಪಟ್ಟಿದ್ದಾನೆ ಎನ್ನಲಾಗಿತ್ತು. ಆದರೆ, ಇದೀಗ ರಾಜ್ಯದ ಯುವತಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿರುವ ನೆಪದಲ್ಲಿ ಮತ್ತೆ ಜಗತ್ತಿನ ಮುಂದೆ ಬಂದಿದ್ದಾನೆ.

Ads on article

Advertise in articles 1

advertising articles 2

Advertise under the article