![ತಂಪುಪಾನೀಯದಲ್ಲಿ ಪ್ರಜ್ಞೆ ತಪ್ಪುವ ಪದಾರ್ಥ ಬೆರೆಸಿ ಪತ್ನಿಯ ಬೆತ್ತಲೆ ಫೋಟೋ ಸೆರೆ ಹಿಡಿದು ಸ್ನೇಹಿತರಿಗೆ ರವಾನಿಸಿದ ಪತಿ! ತಂಪುಪಾನೀಯದಲ್ಲಿ ಪ್ರಜ್ಞೆ ತಪ್ಪುವ ಪದಾರ್ಥ ಬೆರೆಸಿ ಪತ್ನಿಯ ಬೆತ್ತಲೆ ಫೋಟೋ ಸೆರೆ ಹಿಡಿದು ಸ್ನೇಹಿತರಿಗೆ ರವಾನಿಸಿದ ಪತಿ!](https://blogger.googleusercontent.com/img/b/R29vZ2xl/AVvXsEjirr6yAKhCw3TLWN3ZhzDVFUvbapW0z13uePgYjbaeLSRGhVOyjonUAp-u8FUl43_DWS0KWKLAlTQKWfqyWFgvAe6k62rsCS6pp2WuAtWaEbsP9dNyEDPJPfGo1jxfxkgjq8bsTpp5FhYA/s1600/1650287787687758-0.png)
ತಂಪುಪಾನೀಯದಲ್ಲಿ ಪ್ರಜ್ಞೆ ತಪ್ಪುವ ಪದಾರ್ಥ ಬೆರೆಸಿ ಪತ್ನಿಯ ಬೆತ್ತಲೆ ಫೋಟೋ ಸೆರೆ ಹಿಡಿದು ಸ್ನೇಹಿತರಿಗೆ ರವಾನಿಸಿದ ಪತಿ!
Monday, April 18, 2022
ಬೆಂಗಳೂರು: ಪತ್ನಿಗೆ ತಂಪು ಪಾನೀಯದಲ್ಲಿ ಪ್ರಜ್ಞೆ ತಪ್ಪುವ ಪದಾರ್ಥವನ್ನು ಹಾಕಿ ಆಕೆಯ ಬೆತ್ತಲೆ ಚಿತ್ರ ಸೆರೆಹಿಡಿದು ಅದನ್ನು ತನ್ನ ಸ್ನೇಹಿತರಿಗೆ ಕಳುಹಿಸಿರುವ ಪತಿಯ ವಿರುದ್ಧ ಬಸವನಗುಡಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನಕಪುರ ರಸ್ತೆ ನಿವಾಸಿ 30 ವರ್ಷದ ಸಂತ್ರಸ್ತ ಯುವತಿ ನೀಡಿರುವ ದೂರಿನನ್ವಯ ಆಕೆಯ ಪತಿ ವೆಂಕಟಸ್ವಾಮಿ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೂರುದಾರ ಸಂತ್ರಸ್ತೆ 2013ರಲ್ಲಿ ಮೊದಲ ಪತಿಗೆ ವಿಚ್ಛೇದನ ನೀಡಿ ವೆಂಕಟಸ್ವಾಮಿಯನ್ನು ಪ್ರೀತಿಸಿ 2ನೇ ಮದುವೆಯಾಗಿದ್ದರು. ವಿವಾಹವಾದ ಆರಂಭದಲ್ಲಿ ದಂಪತಿ ನಡುವೆ ಯಾವುದೇ ಸಮಸ್ಯೆ ಇರಲಿಲ್ಲ. ಆ ಬಳಿಕ ಪತಿ ವೆಂಕಟಸ್ವಾಮಿ ವರದಕ್ಷಿಣೆ ತರುವಂತೆ ಪೀಡಿಸಲು ಆರಂಭಿಸಿದ್ದಾನೆ.
ಇತ್ತೀಚೆಗೆ ಆರೋಪಿ ತಂಪು ಪಾನೀಯದಲ್ಲಿ ಅಮಲು ಪದಾರ್ಥವನ್ನು ಬೆರೆಸಿ ಪತ್ನಿಗೆ ನೀಡಿದ್ದಾನೆ. ಪತ್ನಿ ಪ್ರಜ್ಞೆ ತಪ್ಪಿದ ಬಳಿಕ ಆಕೆಯ ಬೆತ್ತಲೆ ಚಿತ್ರವನ್ನು ಸೆರೆ ಹಿಡಿದು ಸ್ನೇಹಿತರಿಗೆ ಕಳುಹಿಸಿದ್ದಾನೆಂದು ಸಂತ್ರಸ್ತ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಇತ್ತೀಚೆಗೆ ಪತಿ ತನ್ನ ಸ್ನೇಹಿತರೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಪೀಡಿಸುತ್ತಿದ್ದ ಎಂದು ದೂರಿದ್ದಾರೆ.
ಇದರ ಜೊತೆಗೆ ಸಂತ್ರಸ್ತೆಯ ತಂದೆಯು ಇತ್ತೀಚೆಗೆ ಮೃತಪಟ್ಟಿದ್ದು ಅವರಿಗೆ ಬರುತ್ತಿದ್ದ ಪಿಂಚಣಿ ಹಣವನ್ನು ಕೂಡ ನೀಡುವಂತೆ ಪತಿ ಹಿಂಸಿಸುತ್ತಿದ್ದ. ಹಣ ನೀಡಲು ನಿರಾಕರಿಸಿರುದ್ದಕ್ಕೆ ತನ್ನ ನಗ್ನ ಚಿತ್ರವನ್ನು ಸೆರೆ ಹಿಡಿದು ಎಲ್ಲೆಡೆ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.