![ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಆರೋಪ: ಮೂವರು ಮಹಿಳಾ ಮೇಲ್ವಿಚಾರಕಿಯರ ಆರು ಮಂದಿ ಬಂಧನ ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಆರೋಪ: ಮೂವರು ಮಹಿಳಾ ಮೇಲ್ವಿಚಾರಕಿಯರ ಆರು ಮಂದಿ ಬಂಧನ](https://blogger.googleusercontent.com/img/b/R29vZ2xl/AVvXsEhGsM3THRIO9mJXOxfcdReYWqDBWWJNTyZdNYb9QFFM9V4IHHKZyrMdqj7WTrnvH09NGWNNNuSV_Yd1xdmpEMwO8KDj8WS1dWoJQx0YXwiugzuNBqldZJH2pNE4qXER0KevYwJhCJknC_xG/s1600/1650121020797943-0.png)
ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಆರೋಪ: ಮೂವರು ಮಹಿಳಾ ಮೇಲ್ವಿಚಾರಕಿಯರ ಆರು ಮಂದಿ ಬಂಧನ
Saturday, April 16, 2022
ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಲಾಗುತ್ತಿರುವ ಪ್ರಕರಣಕ್ಕೆ ಸಂಬಂಧಿದಂತೆ ಸಿಐಡಿ ಪೊಲೀಸರು ಮೂವರು ಮಹಿಳಾ ಮೇಲ್ವಿಚಾರಕಿಯರು ಸೇರಿದಂತೆ ಮತ್ತೆ ಆರು ಮಂದಿಯನ್ನು ಬಂಧಿಸಿದ್ದಾರೆ.
ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯ ಮಹಿಳಾ ಮೇಲ್ವಿಚಾರಕಿಯರಾದ ಸುಮಾ, ಸಿದ್ದಮ್ಮ, ಸಾವಿತ್ರಿ ಹಾಗೂ ಕಲಬುರಗಿ ತಾಲೂಕಿನ ಹಾಲ್ ಸುಲ್ತಾನ್‌ಪುರ ನಿವಾಸಿ ಅರುಣ್ ಪಾಟೀಲ್, ಆಳಂದ ತಾಲೂಕಿನ ಚೇತನ್ ನಂದಗಾಂವ್, ರಾಯಚೂರ ಮೂಲದ ಪ್ರವೀಣ್ ಕುಮಾರ್ ಕೆ. ಎಂಬುವವರು ಬಂಧಿತ ಆರೋಪಿಗಳು. ಬಂಧಿತ ಎಲ್ಲಾ ಆರೋಪಿಗಳನ್ನು ಪೊಲೀಸರು ಜೆಎಮ್ಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
545 ಮಂದಿ ಪಿಎಸ್ಐ ಹುದ್ದೆಯ ನೇಮಕಾತಿ ಲಿಖಿತ ಪರೀಕ್ಷೆ ಬರೆದಿದ್ದರು. ಆದರೆ ಈ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ಆರು ಮಂದಿಯ ಬಂಧನವಾಗಿದೆ. ಬೆಂಗಳೂರಿನಿಂದ ಆಗಮಿಸಿರುವ ಸಿಐಡಿ ಪೊಲೀಸರು ಸೇಡಂ ಮೂಲದ ಎಎಸ್ಐ ಪುತ್ರ ವೀರೇಶ್ ಎಂಬ ಅಭ್ಯರ್ಥಿಯನ್ನು ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಇದೀಗ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ.