ಪಶ್ಚಿಮ ಬಂಗಾಳದಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಮೃತ್ಯು: ಟಿಎಂಸಿ ನಾಯಕನ ಪುತ್ರ ಅರೆಸ್ಟ್
Monday, April 11, 2022
ಕೋಲ್ಕತ್ತಾ(ಪಶ್ಚಿಮ ಬಂಗಾಳ): ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆದಿದ್ದು, ಆಕೆ ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಈ ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ ಆಡಳಿತ ಪಕ್ಷ ಟಿಎಂಸಿ ನಾಯಕನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಅತ್ಯಾಚಾರದಲ್ಲಿ ಮೃತಪಟ್ಟ ಬಾಲಕಿಯ ಮೃತದೇಹ ಪರೀಕ್ಷೆ ನಡೆಸದೇ ತರಾತುರಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಕುಟುಂಬಸ್ಥರು ಗಂಭೀರವಾದ ಆರೋಪ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಂತ್ರಸ್ತೆಯ ತಂದೆ, 'ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿ ವಾಪಸ್ ಬಂದಾಗ ತಮ್ಮ ಪುತ್ರಿಯ ದೇಹದಲ್ಲಿ ತೀವ್ರವಾಗಿ ರಕ್ತಸ್ರಾವವಾಗುತ್ತಿತ್ತು. ಆಕೆ ಹೊಟ್ಟೆನೋವಿನಿಂದಲೂ ಬಳಲುತ್ತಿದ್ದಳು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭ ಆಕೆ ಮೃತಪಟ್ಟಿದ್ದಾಳೆ' ಎಂದು ತಿಳಿಸಿದ್ದಾರೆ.
ಈ ಕೃತ್ಯದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖಂಡನ ಪುತ್ರನ ಕೈವಾಡವಿದೆ. ಆತನ ಒತ್ತಡದಿಂದಲೇ ಸಂತ್ರಸ್ತೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸದೆ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಪಶ್ಚಿಮ ಬಂಗಾಳ ರಾಜ್ಯದ ನಾಡಿಯ ಜಿಲ್ಲೆಯ ಹಂಸಖಾಲಿ ಎಂಬಲ್ಲಿ ಕಳೆದ ಕೆಲ ದಿನಗಳ ಹಿಂದೆ ಈ ಘಟನೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಮೃತ ಬಾಲಕಿಗೆ ನ್ಯಾಯ ಒದಗಿಸುವಂತೆ ಬಿಜೆಪಿ ಪ್ರತಿಭಟನೆ ನಡೆಸಿದ್ದು, ರಾಣಾಘಾಟ್ನಲ್ಲಿ 12 ಗಂಟೆಗಳ ಕಾಲ ಬಂದ್ಗೆ ಕರೆ ನೀಡಿದೆ.