ಜನಪ್ರತಿನಿಧಿಯ ಪುತ್ರನಿಂದಲೇ ಯುವತಿಯ ಅಪಹರಿಸಿ ಸಾಮೂಹಿಕ ಅತ್ಯಾಚಾರ
Wednesday, April 20, 2022
ತೆಲಂಗಾಣ: ಜನಪ್ರತಿನಿಧಿಯೋರ್ವರ ಪುತ್ರನೇ ಯುವತಿಯೊಬ್ಬಳನ್ನು ಅಪಹರಿಸಿ ಸ್ನೇಹಿತನೊಂದಿಗೆ ಸೇರಿ ಎರಡು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ತೆಲಂಗಾಣದ ಸೂರ್ಯಪೇಟೆಯ ಕೊಡದ್ ಎಂಬಲ್ಲಿ ಈ ಪ್ರಕರಣ ನಡೆದಿದೆ. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಪಕ್ಷದ ನಗರ ಸಭಾ ಸದಸ್ಯ ಮೊಹಮ್ಮದ್ ಖಾಜಾ ಎಂಬವರ ಪುತ್ರ ಶೇಖ್ ಗೌಸ್ ಪಾಷಾ ಹಾಗೂ ಆತನ ಸ್ನೇಹಿತ ಸಾಯಿರಾಮ್ ರೆಡ್ಡಿ ಬಂಧಿತ ಆರೋಪಿಗಳು.
ಅಪಹರಣ ಹಾಗೂ ಅತ್ಯಾಚಾರಕ್ಕೆ ಸಂಬಂಧಿಸಿದಂತೆ 20 ವರ್ಷದ ಸಂತ್ರಸ್ತೆ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಟಿಆರ್ಎಸ್ ಪಕ್ಷದ ನಗರ ಸಭಾ ಸದಸ್ಯ ಪುತ್ರ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿಗಳು ತಂಪುಪಾನೀಯದಲ್ಲಿ ಪ್ರಜ್ಞೆ ತಪ್ಪುವ ಪದಾರ್ಥ ಬೆರೆಸಿ ಕುಡಿಸಿ ತನ್ನನ್ನು ಶುಕ್ರವಾರ ರಾತ್ರಿ 9.30ರ ಸುಮಾರಿಗೆ ಅಪಹರಿಸಿದ್ದಾರೆ. ಬಳಿಕ ಎರಡು ದಿನಗಳ ಕಾಲ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ತನಗೆ ಸರಿಯಾಗಿ ಎಚ್ಚರ ಮರುಕಳಿಸಿದ ಬಳಿಕ ತಾನು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೇನೆ. ಬಳಿಕ ಮನೆಯವರಿಗೆ ತಿಳಿಸಿ ಪೊಲೀಸರಿಗೆ ದೂರು ನೀಡಿದ್ದಾಗಿ ಸಂತ್ರಸ್ತೆ ತಿಳಿಸಿದ್ದಾಳೆ.