ಚಲಿಸುತ್ತಿದ್ದ ರೈಲಿನ ಶೌಚಾಲಯದಲ್ಲಿಯೇ ಕಬಡ್ಡಿ ಆಟಗಾರ್ತಿ ಮೇಲೆ ಅತ್ಯಾಚಾರ!
Monday, April 25, 2022
ಭಿವಾನಿ(ಹರಿಯಾಣ): ಚಲಿಸುತ್ತಿದ್ದ ರೈಲಿನ ಶೌಚಾಲಯದಲ್ಲಿಯೇ ಕಬಡ್ಡಿ ಆಟಗಾರ್ತಿ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದೀಗ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.
ಹರಿಯಾಣದ ದಂಗರ್ ಗ್ರಾಮದ ನಿವಾಸಿ ಮೋನು ಎಂಬವರು ತಮ್ಮ ಮಗಳನ್ನು ಕಬಡ್ಡಿ ತರಬೇತಿಗೆ ಇಂದೋರ್ನಲ್ಲಿರುವ ಅಕಾಡೆಮಿಗೆ ಸೇರಿಸಿದ್ದರು. ಆದರೆ, ಕೆಲ ತಿಂಗಳ ಬಳಿಕ ಅಲ್ಲಿನ ವಾತಾವರಣ ಸರಿ ಬಾರದ ಕಾರಣ ತಮ್ಮ ಪುತ್ರಿಯನ್ನು ವಾಪಸ್ ಕರೆದುಕೊಂಡು ಬರುತ್ತಿದ್ದರು. ಈ ವೇಳೆ ರೈಲಿನಲ್ಲಿ ರಾತ್ರಿ 12 ಗಂಟೆ ಸುಮಾರಿಗೆ ಆರೋಪಿಯೋರ್ವನು ಪ್ರಜ್ಞೆ ತಪ್ಪುವ ಪದಾರ್ಥ ನೀಡಿದ್ದಾನೆ. ಇದರ ಬೆನ್ನಲ್ಲೇ ಆಕೆಯನ್ನು ಶೌಚಾಲಯದೊಳಗೆ ಕರೆದೊಯ್ದು, ದುಷ್ಕೃತ್ಯವೆಸಗಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ತಾಯಿ ದೂರು ದಾಖಲು ಮಾಡಿದ್ದು, ಆರೋಪಿ ವಿರುದ್ಧ ಅತ್ಯಾಚಾರ ಮತ್ತು ಪೊಕ್ಸೊ ಕಾಯ್ದೆಯಡಿ ದೂರು ದಾಖಲಾಗಿದೆ.
ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ತಮ್ಮ ಪುತ್ರಿ ಕಬಡ್ಡಿ ಆಟಗಾರ್ತಿಯಾಗಿದ್ದು, ಆಕೆಯ ಮೇಲೆ ರೈಲಿನಲ್ಲಿ ಅತ್ಯಾಚಾರ ನಡೆದಿದೆ. ಈ ವೇಳೆ ಆರೋಪಿ ಬೆದರಿಕೆ ಸಹ ಹಾಕಿದ್ದಾನೆಂದು ಸಂತ್ರಸ್ತೆಯ ತಾಯಿ ಆರೋಪ ಮಾಡಿದ್ದಾರೆ.